ಸಂಗಮೇಶ ಮುಶಿಗೇರಿ
ಕೃಷಿಪ್ರಿಯ ನ್ಯೂಸ್ |
ಕೊಪ್ಪಳ : ಗುಂಡಿಗಳು ಬಾಯ್ತೆರೆದು ಸಂಪೂರ್ಣ ಹದಗೆಟ್ಟಿರುವ ಜಿಲ್ಲೆಯ ಕುಷ್ಟಗಿ ತಾಲೂಕಿನ ಹೂಲಗೇರಾ ಗ್ರಾಮದೊಳಗಿನ ಮುಖ್ಯ ರಸ್ತೆಯಲ್ಲಿ ಪ್ರಯಾಣಿಕರು, ಪಾದಾಚಾರಿಗಳು ಪ್ರತಿನಿತ್ಯ ಜೀವ ಭಯದಲ್ಲಿ ಸಂಚರಿಸುವಂತಾಗಿದೆ.
ಹೋಬಳಿ ಕೇಂದ್ರ ಹನುಮಸಾಗರದಿಂದ ಇಳಕಲ್ ಪಟ್ಟಣಕ್ಕೆ ಹಾಗೂ ಸೇಬಿನಕಟ್ಟಿ, ಬಂಡ್ರಗಲ್, ಕಾಟಾಪೂರು ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಿಗೆ ಸಂಪರ್ಕ ಹೊಂದಿರುವ ಮುಖ್ಯ ರಸ್ತೆ ಇದಾಗಿದೆ. ಹೂಲಗೇರಾ ಸುತ್ತಮುತ್ತಲಿನ ಗ್ರಾನೈಟ್ ಫ್ಯಾಕ್ಟರಿಗಳಿಂದ ರಾತ್ರಿ ವೇಳೆ ಬಾರದ ಕಲ್ಲು ಹೇರಿಕೊಂಡು ಬರುವ ಭಾರಿ ವಾಹನಗಳ ಸಂಚಾರದಿಂದ ಈ ರಸ್ತೆಯಲ್ಲಿ ಗುಂಡಿಗಳು ಬಾಯ್ತೆರುದು ಹಾಳಾಗಲು ಕಾರಣವಾಗಿದೆ. ಜೊತೆಗೆ ಈ ರಸ್ತೆಯಲ್ಲಿ ಭಾರಿ ವಾಹನಗಳ ಸಂಚಾರಕ್ಕೆ ಅವಕಾಶ ಇಲ್ಲ ಎಂದು ಹೇಳಲಾಗುತ್ತಿದೆ. ಇದಕ್ಕೆ ಕಡಿವಾಣ ಆಕಬೇಕಾದ ಸಂಬಂಧಪಟ್ಟ ಅಧಿಕಾರಿಗಳು ಮೌನವಹಿಸಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ. ಲಾರಿಗಳ ಸಂಚಾರದಿಂದ ಗುಂಡಿಗಳು ಬಾಯ್ತೆರೆದಿರುವುದರಿಂದ ಟ್ರ್ಯಾಕ್ಟರ್, ಸಾರಿಗೆ ಬಸ್, ಟಾಟಾ ಎಸಿ, ಜೀಪ್ ಸೇರಿದಂತೆ ಬೈಕ್, ರೈತರ ಎತ್ತಿನ ಬಂಡಿ ಸಂಚಾರಕ್ಕೆ ಪಾದಾಚಾರಿಗಳಿಗೆ ಕುತ್ತು ಉಂಟಾಗಿದ್ದು, ಅಪಘಾತಕ್ಕೆ ಎಡೆಮಾಡಿಕೊಟ್ಟಿದೆ. ಅಷ್ಟೇಯಲ್ಲದೇ ರಸ್ತೆಯುದ್ದಕ್ಕೂ ಧೂಳು ಹರಡಲಾರಂಭಿಸಿದೆ. ಕಳೆದ ನಾಲ್ಕೈದು ವರ್ಷಗಳಿಂದ ಗ್ರಾಮಸ್ಥರು ನಿತ್ಯ ಯಾತನೆ ಹಾಗೂ ಶ್ವಾಸಕೋಶದ ಕಾಯಿಲೆಯ ಭೀತಿಯಲ್ಲಿ ಕಾಲಕಳೆಯುವಂತಾಗಿದೆ ಎಂದು ಅಳಲು ತೋಡಿಕೊಳ್ಳುತ್ತಿದ್ದಾರೆ.
ಹೂಲಗೇರಾ ಗ್ರಾ.ಪಂ. ಅಧಿಕಾರಿಗಳು, ಅಧ್ಯಕ್ಷ ಹಾಗೂ ಉಪಾಧ್ಯಕ್ಷ, ಸರ್ವ ಸದಸ್ಯರು ಎಚ್ಚೆತ್ತು, ಗ್ರಾಮದ ರಸ್ತೆಯನ್ನು ಡಾಂಬರೀಕರಣ ಮಾಡಿ ನಿರ್ಭಯದ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.