ಕುಂಬಳಾವತಿಯಲ್ಲಿ ಸಿಡಿಲಿಗೆ ಆಡು ಸೇರಿ 3 ಕುರಿ ಬಲಿ

ಸಂಗಮೇಶ ಮುಶಿಗೇರಿ
ಕೃಷಿಪ್ರಿಯ ನ್ಯೂಸ್ |

ಕೊಪ್ಪಳ : ಸಿಡಿಲು ಬಡಿದು ಒಂದು ಆಡು ಸೇರಿದಂತೆ ಮೂರು ಕುರಿಗಳು ಬಲಿಯಾದ ಘಟನೆ ಜಿಲ್ಲೆಯ ಕುಷ್ಟಗಿ ತಾಲೂಕಿನ ಕುಂಬಳಾವತಿ ಗ್ರಾಮದ ಸೀಮಾದ ಜಮೀನೊಂದರಲ್ಲಿ ಶುಕ್ರವಾರ ಸಂಜೆ 6.30ರ ಸುಮಾರಿಗೆ ನಡೆದಿದೆ.

ಗ್ರಾಮದ ಕುರಿಗಾಯಿ ಶಿವಪ್ಪ ರಾಮಪ್ಪ ಕುಂಟೋಜಿ ಎಂಬುವರಿಗೆ ಸೇರಿದ ಕುರಿ, ಆಡು ಎಂದು ಗುರುತಿಸಲಾಗಿದೆ. ಕುರಿಗಳನ್ನು ಮೇಯಿಸುತ್ತಿರುವ ವೇಳೆ ಸಂಜೆ ಬಿರುಗಾಳಿ, ಗುಡುಗು ಸಿಡಿಲಿನೊಂದಿಗೆ ಆರಂಭವಾದ ಮಳೆಯಿಂದಾಗಿ ಈ ಘಟನೆ ಸಂಭವಿಸಿದೆ. ಸಿಡಿಲಿನ ಹೊಡೆತಕ್ಕೆ ಸ್ಥಳದಲ್ಲಿ ಒಂದು ಆಡು, ಒಂದು ಕುರಿ ಬಲಿಯಾದರೆ ಆಘಾತಕ್ಕೊಳಗಾಗಿದ್ದ ಮತ್ತೊಂದು ಕುರಿ ಶನಿವಾರ ಬೆಳಗಿನ ಜಾವ ಹಟ್ಟಿಯಲ್ಲಿ ಸಾವನ್ನಪ್ಪಿದೆ. ಇನ್ನೂ ನಾಲ್ಕು ಕುರಿಗಳು ಕಣ್ಣುಗಳನ್ನು ಕಳೆದುಕೊಂಡಿವೆ. ಅದೃಷ್ಟವಶಾತ್ ಮನುಷ್ಯರಿಗೆ ಯಾವುದೇ ಜೀವಹಾನಿ ಸಂಭವಿಸಿಲ್ಲ ಎಂದು ಬೆಲೆ ಬಾಳುವ ಕುರಿ ಕಳೆದುಕೊಂಡು ಸಂಕಷ್ಟದಲ್ಲಿರುವ ಕುರಿಗಾಯಿ ಶಿವಪ್ಪ ಕುಂಟೋಜಿ ಮಾಹಿತಿ ನೀಡಿದ್ದು, ಪರಿಹಾರಕ್ಕಾಗಿ ಸರ್ಕಾರಕ್ಕೆ ಅಂಗಲಾಚಿದ್ದಾರೆ. ನಿನ್ನೆ ರಾತ್ರಿ ಘಟನಾ ಸ್ಥಳಕ್ಕೆ ಪಶು ಸಂಗೋಪನಾ ಅಧಿಕಾರಿಗಳು, ಪೊಲೀಸರು ಭೇಟಿ ಪಲಿಶೀಲಿಸಿ ವರದಿ ಪಡೆದುಕೊಂಡಿದ್ದಾರೆ.