ಸಂಗಮೇಶ ಮುಶಿಗೇರಿ
ಕೃಷಿಪ್ರಿಯ ನ್ಯೂಸ್ |
ಕೊಪ್ಪಳ : ಬೆಲೆ ಬಾಳುವ ಎರಡು ಎಮ್ಮೆಗಳಿಗೆ ಸಿಡಿಲು ಬಡಿದು ಬಲಿಯಾದರೆ ಒಂದು ಟೆಂಗಿನ ಮರಕ್ಕೆ ಬೆಂಕಿ ತಗುಲಿದ ಘಟನೆ ಜಿಲ್ಲೆಯ ಕುಷ್ಟಗಿ ತಾಲೂಕಿನಲ್ಲಿ ಪ್ರತ್ಯೇಕ ಎರಡುಕಡೆ ಏ.18 ರಂದು ಗುರುವಾರ ಸಂಜೆ ನಡೆದಿದೆ.
ಬಳೂಟಗಿ ಗ್ರಾಮದಲ್ಲಿ ರೈತ ಮುರ್ತುಜಾ ಸಾಬ್ ತಂ. ಕಾಸಿಂಸಾಬ್ ಎಂಬುವರಿಗೆ ಸೇರಿದ ಎಮ್ಮೆಗಳಿಗೆ ಸಿಡಿಲು ಬಡಿದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿವೆ. ತಾವರಗೇರಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ. ಘಟನಾ ಸ್ಥಳಕ್ಕೆ ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ಕಾರ್ಯ ಕೈಗೊಂಡಿದ್ದಾರೆ. ಹೈನುಗಾರಿಕೆಯಿಂದ ಬದುಕು ಕಟ್ಟಿಕೊಂಡಿದ್ದ ರೈತ ಬೆಲೆ ಬಾಳುವ ಎಮ್ಮೆಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದಾನೆ. ರೈತನಿಗೆ ಸೂಕ್ತ ಪರಿಹಾರ ಕಲ್ಪಿಸುವಂತೆ ಸರ್ಕಾರಕ್ಕೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಮತ್ತೊಂದೆಡೆ ತಾಲೂಕಿನ ಹಾಬಲಕಟ್ಟಿ ಗ್ರಾಮದಲ್ಲಿ ಒಂದು ಟೆಂಗಿನ ಮರಕ್ಕೆ ಸಿಡಿಲು ಬಡಿದು ಬೆಂಕಿ ಹತ್ತಿಕೊಂಡ ಘಟನೆ ಸಂಭವಿಸಿದೆ. ಗ್ರಾಮದ ಶಂಕ್ರಪ್ಪ ತಂ. ಬಸಪ್ಪ ಸಂಕನೂರ ಎಂಬುವರಿಗೆ ಸೇರಿದ ಟೆಂಗಿನ ಮರ ಎಂದು ಗುರುತಿಸಲಾಗಿದೆ. ಯಾವುದೇ ಜೀವಹಾನಿ ಸಂಭವಿಸಿಲ್ಲ ಎಂದು ಗ್ರಾಮಸ್ಥರಿಂದ ಮಾಹಿತಿ ಲಭ್ಯವಾಗಿದೆ.