ಸಂಗಮೇಶ ಮುಶಿಗೇರಿ
ಕೃಷಿಪ್ರಿಯ ನ್ಯೂಸ್ |
ಕೊಪ್ಪಳ : ಜಿಲ್ಲೆಯ ಕುಷ್ಟಗಿ ತಾಲೂಕಿನ ಜೂಲಕಟ್ಟಿ ಗ್ರಾಮದ ಬಳಿ ಸಿಡಿಲು ಬಡಿದು ಮೃತಪಟ್ಟ ತಾಲೂಕಿನ ಕೊರಡಕೇರಾ ಗ್ರಾಮದ ಗುರುವಿನ ಕುಟುಂಬಕ್ಕೆ ತಾಲೂಕಾಡಳಿತದಿಂದ ₹5 ಲಕ್ಷ ಪರಿಹಾರ ವಿತರಿಸಲಾಗಿದೆ.
ಗುರುವಾರ ಮದ್ಯಾಹ್ನ 3.39ರ ಸುಮಾರಿಗೆ ತಾಲೂಕಿನ ಕೊರಡಕೇರಾ ಗ್ರಾಮದ ಅಮೋಘಸಿದ್ದಯ್ಯ ಶಿವಲಿಂಗಯ್ಯ ಗುರುವಿನ (32) ಸಿಡಿಲು ಬಡಿದು ಸ್ಥಳದಲ್ಲೇ ಮೃತಪಟ್ಟಿದ್ದರು. ಸ್ಥಳಕ್ಕೆ ಭೇಟಿ ನೀಡಿದ್ದ ಕಂದಾಯ ಇಲಾಖೆ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳು ಪರಿಶೀಲನೆ ಕಾರ್ಯನಡೆಸಿದ್ದರು. ಬಳಿಕ ಮರಣೋತ್ತರ ಪರೀಕ್ಷೆಗಾಗಿ ಕುಷ್ಟಗಿ ಸಾರ್ವಜನಿಕ ಆಸ್ಪತ್ರೆಗೆ ಮೃತದೇಹವನ್ನು ತರಲಾಗಿತ್ತು. ಸ್ಥಳಕ್ಕೆ ಭೇಟಿ ನೀಡಿದ ತಹಸೀಲ್ದಾರ್ ರವಿ ಎಸ್. ಅಂಗಡಿ ಅವರು ಮೃತನ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಬಳಿಕ ಸ್ಥಳದಲ್ಲೇ ₹5 ಲಕ್ಷ ಮೊತ್ತದ ಪರಿಹಾರ ಚೆಕ್ ನೀಡಿದರು. ಈ ವೇಳೆ ಆರ್.ಐ.ಗಳಾದ ಉಮೇಶಗೌಡ, ಶರಣಯ್ಯ ಹಿರೇಮಠ, ವಿ.ಎ. ಗಂಗಾಧರ ಅರಳಿಕಟ್ಟಿ ಹಾಗೂ ಗ್ರಾಮಸ್ಥರು ಇದ್ದರು.