ಸಂಗಣ್ಣ ಕರಡಿಗೆ ಎರಡು ನಾಲಿಗೆಯಿದೆ – ಡಿ.ಎಚ್.ಪಾಟೀಲ್

ಸಂಗಮೇಶ ಮುಶಿಗೇರಿ

ಕೃಷಿಪ್ರಿಯ ನ್ಯೂಸ್ |

ಕೊಪ್ಪಳ : ವಿಶ್ವ ಕಂಡ ಶ್ರೇಷ್ಠ ನಾಯಕ ಯಾರೆಂದರೆ ಅದು ನರೇಂದ್ರ ಮೋದಿ ಎನ್ನುತ್ತಿದ್ದ ಸಂಗಣ್ಣ ಕರಡಿ, ಟಿಕೆಟ್ ಸಿಗಲಿಲ್ಲ ಎಂಬ ಕಾರಣಕ್ಕೆ ಸದ್ಯ ಪಕ್ಷ ಬದಲಿಸಿದ ಅವರು, ಸದ್ಯ ಈ ನಾಡು ಕಂಡಂತ ಅಪರೂಪದ ರಾಜಕಾರಣಿ ಯಾರೆಂದರೆ ಅದು ಸಿದ್ದರಾಮಯ್ಯ ಎಂದು ಹೇಳುವ ಅವರಿಗೆ ಅತ್ತಿಂದಿತ್ತ ಹೊರಳಿಸುವ ಎರಡು ನಾಲಿಗೆ ಹೊಂದಿದ್ದಾರೆ ಎಂದು ವಿಧಾನಸಭಾ ವಿರೋಧ ಪಕ್ಷದ ಮುಖ್ಯ ಸಚೇತಕ ಹಾಗೂ ಶಾಸಕ ದೊಡ್ಡನಗೌಡ ಎಚ್. ಪಾಟೀಲ್ ಕುಟುಕಿದರು.

ಜಿಲ್ಲೆಯ ಕುಷ್ಟಗಿ ತಾಲೂಕಿನ ಹಿರೇಮನ್ನಾಪೂರದಲ್ಲಿ ಶುಕ್ರವಾರ ರಾತ್ರಿ ನಡೆದ ಕೊಪ್ಪಳ ಲೋಕಸಭಾ ಬಿಜೆಪಿ ಅಭ್ಯರ್ಥಿ ಡಾ.ಬಸವರಾಜ ಕ್ಯಾವಟರ್ ಪರ ಮತಯಾಚನೆ ಬಹಿರಂಗ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸಧ್ಯ ಬಯ್ಯಾಪೂರ, ಹಿಟ್ನಾಳ ಜೊತೆ ಒಂದಾಗಿದ್ದೀರಿ. ಕಳೆದ ಎರಡು ಚುನಾವಣೆಯಲ್ಲಿ ಮತ ನೀಡಿದ ಮತದಾರರೇನಾಗಬೇಕು. ಕಾರ್ಯಕರ್ತರೇನು ಮಾಡಬೇಕು ಅವರಿಗೇನು ಸಂದೇಶ ನೀಡುತ್ತೀರಿ ಎಂಬ ಪ್ರಶ್ನೆ ಸಂಗಣ್ಣ ಕರಡಿ ಅವರಿಗೆ ಮಾಡಬೇಕಿದೆ ಎಂದರು.

ತಮ್ಮ ತಂದೆಗೆ ಸಿಗಬೇಕಾದ ಟಿಕೆಟ್, ಡಾ.ಬಸವರಾಜ ಕ್ಯಾವಟರ್ ಅವರಿಗೆ ಮಾರಾಟವಾಗಿದೆ ಎಂದು ಅಮರೇಶ ಕರಡಿ ಹೇಳಿಕೆ ನೀಡಿದ್ದಾರೆ. ಹಾಗಾದರೆ 2014ರಲ್ಲಿ ಸಂಸದರಿದ್ದ ಶಿವರಾಮೆಗೌಡರಿಗೆ ಸಿಗಬೇಕಾದ ಟಿಕೆಟ್ ತಪ್ಪಿ ಸಂಗಣ್ಣ ಕರಡಿಗೆ ಸಿಕ್ಕಾಗ ಟಿಕೆಟ ಗಿಟ್ಟಿಸಿಕೊಳ್ಳಲು ನೀವೆಷ್ಟು ಹಣ ನೀಡಿ ಪಡೆದುಕೊಂಡಿದ್ದೀರಿ ಎಂದು ಬಹಿರಂಗಪಡಿಸಬೇಕು ಎಂದು ಸವಾಲು ಹಾಕಿದ ಶಾಸಕ ದೊಡ್ಡನಗೌಡ, ಸಂಗಣ್ಣ ಹಾಗೂ ಅವರ ಮಕ್ಕಳದ್ದು ಸ್ವಾರ್ಥ ರಾಜಕಾರಣ ಎಂದು ಹರಿಹಾಯ್ದರು.

ಕಾಂಗ್ರೆಸ್ ಇರಲಿ ಅಥವಾ ಬಿಜೆಪಿ ಇರಲಿ ಸ್ವಪಕ್ಷಕ್ಕೆ ಮತ ಹಾಕಿಸುವುದು ಧರ್ಮ. ಆದರೆ, ಮಾಜಿ ಶಾಸಕ ಬಯ್ಯಾಪೂರ ತಳುವಗೇರಾದಲ್ಲಿ ಇತ್ತೀಚೆಗೆ ಶರಣಬಸ್ಸಪ್ಪನ ಆಣೆಯಾಗಿ ಯಾರಿಗೆ ಮಾತು ಕೊಟ್ಟಿರುತ್ತೇವೊ ಅವರಿಗೆ ಮತ ಹಾಕಿಸುತ್ತೇವೆ ಎಂದು ಹೇಳಿಕೆ ನೀಡಿದ್ದಾರೆ. ಈ ಹಿಂದೆ ಬಿಜೆಪಿಯಲ್ಲಿದ್ದಾಗ ಸಂಗಣ್ಣ ಕರಡಿ ಯಾವುದೇ ಕಾರ್ಯವಿದ್ದರೂ ಕಾಂಗ್ರೆಸ್ ಬೆಂಬಲಿಸಿದ್ದರು ಎಂಬುದು ಈವಾಗ ಸಾಬೀತಾಗಿದೆ. ಸ್ವಪಕ್ಷದವರಾದ ಹಿಟ್ನಾಳ, ಬಸಟ್ಟೆಪ್ಪ ಈ ಇಬ್ಬರ ಕುತ್ತಿಗೆ ಕೊಯ್ದು ಸಂಗಣ್ಣ ಕರಡಿ ಸಂಸದರಾಗಲು ಬಯ್ಯಾಪೂರ ಕಾರಣರಾದರು ಎಂಬುದು ಕೂಡ ಅರ್ಥವಾಗಲಿದೆ ಎಂದರು.

ಯುವಕರು ವಿದ್ಯಾವಂತರು ಜನಸೇವೆ ಮಾಡಬೇಕು ಎಂಬ ಉದ್ದೇಶದಿಂದ ಡಾ.ಬಸವರಾಜ ಕ್ಯಾವಟರ್ ಅವರಿಗೆ ಟಿಕೆಟ್ ಸಿಕ್ಕಿದೆ. ಕೊಪ್ಪಳ ಲೋಕಸಭಾ ಚುನಾವಣೆ ಇತಿಹಾಸದಲ್ಲಿ ಕುಷ್ಟಗಿ ತಾಲೂಕಿನವರು ಈವರೆಗೆ ಯಾರೂ ಸಂಸದರಾಗಿಲ್ಲ. ಇವಾಗ ಸುವರ್ಣ ಅವಕಾಶ ಒದಗಿಬಂದಿದೆ. ತವರು ಕ್ಷೇತ್ರದವರಾದ ಅಭ್ಯರ್ಥಿ ಬಸವರಾಜ ಕ್ಯಾವಟರ್ ಅವರಿಗೆ ಮತ ನೀಡಿ ಸಂಸದರನ್ನಾಗಿ ಮಾಡುವ ಮೂಲಕ ಮತ್ತೊಮ್ಮೆ ನರೇಂದ್ರ ಮೋದಿಜಿ ಪ್ರಧಾನಿಯಾಗಲು ಬೆಂಬಲಿಸಬೇಕು ಎಂದು ಮತದಾರರಲ್ಲಿ ವಿನಂತಿಸಿಕೊಂಡರು.

ಈ ವೇಳೆ ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ, ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ್ ಸೇರಿದಂತೆ ಪ್ರಮುಖರು, ಮಂಡಲ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಇದ್ದರು.