ಅನ್ಸಾರಿಗೆ ಮೋಸ; ಮುಸ್ಲಿಮರು ತಟಸ್ಥವಿರಲು – ನಯಿಮ್ ಕರೆ

ಸಂಗಮೇಶ ಮುಶಿಗೇರಿ

ಕೃಷಿಪ್ರಿಯ ನ್ಯೂಸ್ |

ಕೊಪ್ಪಳ: ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಸೋಲಿಗೆ ಕಾರಣರಾದವರ ವಿರುದ್ಧ ತಕ್ಕಶಾಸ್ತಿಗೆ ಮೇ 3 ಸಭೆ ಕರೆದಿದ್ದು, ಅಲ್ಲಿಯ ವರೆಗೂ ತಟಸ್ಥ ಇರಲು ಜಿಲ್ಲೆಯ ಮುಸ್ಲಿಂ ಸಮಾಜಕ್ಕೆ ಅಖಿಲ ಕರ್ನಾಟಕ ಮುಸ್ಲಿಂ ಹೋರಾಟ ಸಮಿತಿ ರಾಜ್ಯಾಧ್ಯಕ್ಷ ಅಬ್ದುಲ್ ನಯಿಮ್ ಕರೆ ನೀಡಿದ್ದಾರೆ.

ಈ ಕುರಿತು ಕುಷ್ಟಗಿ ಪಟ್ಟಣದಲ್ಲಿ ಮಂಗಳವಾರ ಮಾಧ್ಯಮಕ್ಕೆ ನೀಡಿರುವ ಮಾಹಿತಿಯಲ್ಲಿ ತಿಳಿಸಿದ್ದಾರೆ. ಜಿಲ್ಲೆಯ ಗಂಗಾವತಿ ವಿಧಾನಸಭಾ ಕ್ಷೇತ್ರದ ಮುಸ್ಲಿಂ ಸಮಾಜದ ಏಕೈಕ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಅವರು ಮುಸ್ಲಿಂ ಸಮಾಜ ಸೇರಿದಂತೆ ದೀನ ದಲಿತರ, ಹಿಂದುಳಿದ ವರ್ಗದವರಿಗೆ ಆಸರೆಯಾಗಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದವರೇಯಾದ ರಾಘವೇಂದ್ರ ಹಿಟ್ನಾಳ, ರಾಜಶೇಖರ ಹಿಟ್ನಾಳ ಸೇರಿದಂತೆ ಅವರ ಕುಟುಂಬ ಇಕ್ಬಾಲ್ ಅನ್ಸಾರಿ ಅವರ ಸೋಲಿಗೆ ಪರೋಕ್ಷವಾಗಿ ಕಾರಣರಾಗಿದ್ದಾರೆ. ಈ ಕುರಿತು ಯಲಬುರ್ಗಾ ಕ್ಷೇತ್ರದ ಶಾಸಕ ಬಸವರಾಜ ರಾಯರೆಡ್ಡಿ ಅವರು ಕೊಪ್ಪಳ ಜಿಲ್ಲಾ ಕೇಂದ್ರದಲ್ಲಿ ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ ಅವರಿಗೆ ಮಾಧ್ಯಮ ಮುಂದೆಯೇ ಪರೋಕ್ಷವಾಗಿ ಅನ್ಸಾರಿ ಸೋಲಿಸಿಬಿಟ್ರೇನಪ ಎಂದು ಪ್ರಶ್ನಿಸಿದಾಗ ರಾಘವೇಂದ್ರ ಹಿಟ್ನಾಳ ಅವರು ಹಾಗೇನಿಲ್ಲ ಎಂದು ನಗುತ್ತಲೇ ಉತ್ತರಿಸಿದ ವೀಡಿಯೊ ಸಧ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ. ಇದರಿಂದ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಅವರ ಆಕ್ರೋಶ ಹಾಗೂ ಸ್ವಪಕ್ಷದವರ ವಿರುದ್ಧ ಮುನಿಸಿಗೆ ಕಾರಣವಾಗಿದೆ. ಈ ಬೆಳವಣಿಗೆ ಜಿಲ್ಲೆಯ ಮುಸ್ಲಿಂ ಸಮಾಜ ಹಾಗೂ ಇಕ್ಬಾಲ್ ಅನ್ಸಾರಿ ಅವರ ರಾಜಕೀಯ ಭವಿಷ್ಯದ ಅಳಿವು ಉಳಿವಿನ ಪ್ರಶ್ನೆಯಾಗಿದೆ.
ಸಧ್ಯ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ನಿಂದ ಸ್ಪರ್ಧಿಸಿರುವ ರಾಜಶೇಖರ ಹಿಟ್ನಾಳ ಹಾಗೂ ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ ಅವರು ಇಕ್ಬಾಲ್ ಅನ್ಸಾರಿ ಅವರ ಸೋಲಿಗೆ ಕಾರಣ ಏನೆಂಬುದು ಮೇ 3ರ ರೊಳಗೆ ಬಹಿರಂಗವಾಗಿ ಹೇಳಿಕೆ ನೀಡಬೇಕು ಅಥವಾ ಬಹಿರಂಗ ಕ್ಷಮೆಯಾಚಿಸಬೇಕು. ಇಲ್ಲದಿದ್ದರೆ ಅಂದು ಮಧ್ಯಾಹ್ನ 3 ಗಂಟೆ ಬಳಿಕ ಜಿಲ್ಲೆಯ ಮುಸ್ಲಿಂ ಸಮಾಜದ ಗುರುಹಿರಿಯರು ಜೂಮ್ ಮೀಟಿಂಗ್ ಆಯೋಜಿಸಿ ರಾಜಶೇಖರ ಹಿಟ್ನಾಳ ಅವರಿಗೆ ಮತ ನೀಡಬೇಕೋ ಬೇಡವೋ ಎಂಬುದರ ಕುರಿತು ನಿರ್ಣಯ ಕೈಗೊಳ್ಳಲಾಗುತ್ತದೆ. ಅಲ್ಲಿಯವರೆಗೂ ಜಿಲ್ಲೆಯ ಮುಸ್ಲಿಂ ಬಾಂಧವರು ತಟಸ್ಥ ಧೋರಣೆ ತಾಳಬೇಕು ಎಂದು ಅಖಿಲ ಕರ್ನಾಟಕ ಮುಸ್ಲಿಂ ಹೋರಾಟ ಸಮಿತಿ ರಾಜ್ಯಾಧ್ಯಕ್ಷ ಅಬ್ದುಲ್ ನಯಿಮ್ ಅವರು ವಿನಂತಿ ಮಾಡಿದ್ದಾರೆ.