ಸಂಗಮೇಶ ಮುಶಿಗೇರಿ
ಕೃಷಿಪ್ರಿಯ ನ್ಯೂಸ್ |
ಕೊಪ್ಪಳ : ನೇಮಕಾತಿಗಳನ್ನು ತಡೆಹಿಡಿಯುವಂತೆ ಮುಖ್ಯಮಂತ್ರಿಗೆ ಕಾನೂನು ಸಚಿವ ಹೆಚ್.ಕೆ. ಪಾಟೀಲ್ ಬರೆದಿರುವ ಪತ್ರದಿಂದ ಹೈದರಾಬಾದ್ ಕರ್ನಾಟಕ ಭಾಗದ ಜನತೆಗೆ ದೊಡ್ಡ ದ್ರೋಹವಾಗಿದೆ ಎಂದು ಹೈದರಾಬಾದ್ ಕರ್ನಾಟಕ 371ಜ ಮೀಸಲಾತಿ ಹೋರಾಟ ಸಮಿತಿ ರಾಜ್ಯ ಕಾರ್ಯದರ್ಶಿ ಗಂಗಾಧರ ಹೆಚ್. ಕುಷ್ಟಗಿ ಅವರು ಹೇಳಿದರು.
ಈ ಕುರಿತು ಜಿಲ್ಲೆಯ ಕುಷ್ಟಗಿ ಪಟ್ಟಣದಲ್ಲಿ ಶನಿವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. 371 ಜೆ ಕಲಂ ವಿಶೇಷ ಸ್ಥಾನಮಾನದಡಿ ಹೈದರಾಬಾದ್ ಕರ್ನಾಟಕ ಭಾಗದ ಅಭ್ಯರ್ಥಿಗಳ ನೇಮಕಾತಿ ವಿಷಯದಲ್ಲಿ. ಈ ಭಾಗ ಹೊರತುಪಡಿಸಿ ಬೇರೆ ಜಿಲ್ಲೆಗಳ ಪ್ರತಿಭಾವಂತ ಅಭ್ಯರ್ಥಿಗಳಿಗೆ ಅನ್ಯಾಯವಾಗುತ್ತಿದೆ ಎಂದು ದೂರುಗಳು ಬಂದಿವೆ. ಅನ್ಯಾಯ ಆಗದಹಾಗೆ ಸಿಎಂ ಸಿದ್ದರಾಮಯ್ಯ ಅವರು ಈ ಹಿಂದೆ ನೇಮಕಾತಿಯಾದ ಮತ್ತು ಮರಳಿ ಕರೆದಿರುವ ನೇಮಕಾತಿ ತಡೆ ಹಿಡಿದು ಪೂರ್ವಾನ್ವಯವಾಗುವಂತೆ ಸೂಕ್ತವಾದ ತೀರ್ಮಾನ ತೆಗೆದುಕೊಳ್ಳಬೇಕು ಎಂದು ಪತ್ರ ಬರೆದಿರುವುದು ಹೈದರಾಬಾದ್ ಕರ್ನಾಟಕ ಜನತೆಗೆ ಬಹು ದೊಡ್ಡ ದ್ರೋಹವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹೈದರಾಬಾದ್ ಕರ್ನಾಟಕ ವಿಶೇಸ ಸ್ಥಾನಮಾನ ನೀಡಬೇಕೆಂದು ಯಾವಾಗ ಪಾರ್ಲಿಮೆಂಟ್ ಅಲ್ಲಿ ತೀರ್ಮಾನವಾಗಿ 371ಜೆ ಯ್ಯಾಕ್ಟ್ ಪಾಸಾಯಿತು. ರಾಷ್ಟ್ರಪತಿಗಳು ಮತ್ತು ರಾಜ್ಯಪಾಲರಿಗೆ ಹೈದರಾಬಾದ್ ಕರ್ನಾಟಕ ಪ್ರದೇಶ ಅಭಿವೃದ್ಧಿಯಲ್ಲಿ ಪ್ರತಿ ವರ್ಷ ಯಾವುದೇ ತಾರತಮ್ಯ, ಅನ್ಯಾಯವಾಗದಂತೆ ನೋಡಿಕೊಳ್ಳಲು ಉಸ್ತುವಾರಿ ವಹಿಸಲು ಗೆಜೆಟೆಡ್ ಪಾಸ್ ಮಾಡಲಾಗಿತು. ವಿಶೇಷ ಅಧಿಕಾರ ವಹಿಸಿಕೊಂಡ ರಾಷ್ಟ್ರಪತಿಗಳು ರಾಜ್ಯಪಾಲರಿಗೆ ಪರಮಾಧಿಕಾರ ಕೊಟ್ಟರು. ರಾಜ್ಯ ಸರ್ಕಾರದ ಮೇಲೆ ನಂಬಿಕೆಯಿಟ್ಟು ಅಧಿಕಾರ ವಹಿಸಿಕೊಟ್ಟರೆ ರಾಜ್ಯ ಸರ್ಕಾರ ಮಂಗನಾಟ ಆರಂಭಿಸಿದೆ ಎಂದರು.
ಸರ್ಕಾರ ಆಗಿನ ಕಾಂಗ್ರೆಸ್ ಕ್ಯಾಬಿನೆಟ್ ಸಚಿವ ಎಚ್.ಕೆ. ಪಾಟೀಲ್ ಅವರನ್ನು 371ಜೆ ವಿಶೇಷ ಸ್ಥಾನಮಾನ ಅನುಷ್ಠಾನ ಸಮಿತಿ ಅಧ್ಯಕ್ಷರನ್ನಾಗಿ ಮಾಡಿತು. ಹೈದರಾಬಾದ್ ಕರ್ನಾಟಕ ಭಾಗದವರಲ್ಲದ ವ್ಯಕ್ತಿಯನ್ನು ಅಧ್ಯಕ್ಷರನ್ನಾಗಿ ಮಾಡಿದಾಗ ಪ್ರತಿಭಟನೆ ಮಾಡಲಾಯಿತು. ಆದರೆ, ಹೈದರಾಬಾದ್ ಕರ್ನಾಟಕ ಹೋರಾಟಗಾರರು ಎಂದೇಳಿಕೊಂಡು ಹೋದ ಕಲವರು ಸಚಿವರಿಗೆ ಬಹುಪರಾಕ್ ಹಾಕಿ ಕಾಂಗ್ರೆಸ್ ವಕ್ತಾರರಾದರು. ಇಂದು ಎಚ್.ಕೆ. ಪಾಟೀಲ್ ಅವರ ಪತ್ರಕ್ಕೆ ಸ್ಪಷ್ಟೀಕರಣ ಕೊಡಲು ನಿಂತಿದ್ದಾರೆ. ನಮ್ಮ ಜನತೆಯ ಪರವಾಗಿ ಖಡ್ಗ ಹಿಡಿದು ನಿಲ್ಲಬೇಕಾದವರು ಅವರಿಗೆ ಗುರಾಣಿಯಾಗಿ ನಿಂತಿರುವು ದುರಂತ ಎಂದರು.
ನಮ್ಮ ಸರ್ಕಾರ ಸಾಮಾಜಿಕ ನ್ಯಾಯದಡಿ ನಡೆಯುತ್ತೇವೆ ಎಂದು ಸಾಮಾಜಿಕ ನ್ಯಾಯದ ನೇತಾರ ಬಸವಣ್ಣನವರ ಬಾವಚಿತ್ರ ಇರಿಸಿದ ಸಿಎಂ ಸಿದ್ದರಾಮಯ್ಯ ಅದೇ ಬಸವಣ್ಣನ ನಾಡಿನಲ್ಲಿ ದ್ರೋಹವಾಗುತ್ತಿದ್ದರು ಈ ಭಾಗದಲ್ಲಿ ಕೈಗೊಂಡಿರುವ ಚುನಾವಣೆಯ ಪ್ರಚಾರ ಸಭೆಗಳ ಭಾಷಣಗಳಲ್ಲಿ ಯಾವುದೇ ರೀತಿಯ ಆಶ್ವಾಸನೆ ನೀಡುತ್ತಿಲ್ಲ ಎಂದು ಟೀಕಿಸಿದರು.
ಇಲ್ಲಿನ ಜಿಲ್ಲಾ ಉಸ್ತುವಾರಿ ಮಂತ್ರಿ ಶಿವರಾಜ ತಂಗಡಗಿಗೆ ಈ ಭಾಗದ ನೀರಾವರಿ, ಏತನೀರಾವರಿ ಬಗ್ಗೆ ಕಾಳಜಿ ಇಲ್ಲ. ಕೇವಲ ಕನಕಗಿರಿ ಉತ್ಸವ, ಆನೆಗೊಂದಿ ಉತ್ಸವಗಳ ಮ್ಯೂಸಿಕ್ ಪಾರ್ಟಿ ಮಂತ್ರಿಯಾಗಿದ್ದಾರೆ. ಬೀದರನ ಅರಣ್ಯ ಸಚಿವ ಈಶ್ವರ ಖಂಡ್ರೆ ಹುಲಿ ಉಗುರು ಸಚಿವರಾಗಿದ್ದಾರೆ. ಇಂಥವರು ಹೈದರಾಬಾದ್ ಕರ್ನಾಟಕದಲ್ಲಿ ಅಧಿಕಾರದಲ್ಲಿರುವುದು ನಮ್ಮ ದುರಂತ. ದಾರಿಗೊತ್ತಿರದ ಅಜೆಯಸಿಂಗ್ ಎಂಬುವರನ್ನು ಹೈದರಾಬಾದ್ ಕರ್ನಾಟಕ ಪ್ರದೇಶಾಭಿವೃದ್ದಿ ಮಂಡಳಿ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಹುಡುಗಬಟ್ಟಿತರ ಇರುವ ಪ್ರಿಯಾಂಕಾಖರ್ಗೆಯನ್ನು ಜಿಲ್ಲಾ ಉಸ್ತುವಾರಿ ಮಂತ್ರಿ ಮಾಡಲಾಗಿದೆ. ಸಿದ್ದರಾಮಯ್ಯಗೆ, ಎಚ್.ಕೆ. ಪಾಟೀಲರ ಹಿಂದೆ ನಿಂತು ಹಲ್ಲು ಕಿಸಿಯುತ್ತಾರೆ. ಆದರೆ, ನಮ್ಮ ಭಾಗದ ಜನರಿಗೆ ದ್ರೋಹವಾಗುತ್ತಿದೆ ಎಂದು ಹೇಳುವ ಎದೆಗಾರಿಕೆ ಇವರಲ್ಲಿಲ್ಲ ಎಂದು ಮೂದಲಿಸಿದರು.
ಬಹುದಿನಗಳ ಹೋರಾಟದ ಪ್ರತಿಫಲವಾಗಿ ಈ ಭಾಗಕ್ಕೆ ಬಂದ 371ಜೆ ಕಲಂ ವಿಶೇಷ ಸ್ಥಾನಮಾನ ಸಿಕ್ಕಿದೆ. ಆದರೆ, ಇಂಥ ಮಂತ್ರಿಗಳಿಂದ ದೊಡ್ಡ ಆಘಾತವಾಗುತ್ತಿದೆ. ಈ ಚುನಾವಣೆ ಸಂದರ್ಭದಲ್ಲಿ ಈ ಭಾಗದ ಜನತೆ ಎಚ್.ಕೆ. ಪಾಟೀಲರಿಂದ ಆಗುತ್ತಿರು ದ್ರೋಹ ಕುರಿತು ಮತ್ತು ಕೊಪ್ಪಳ ಏತ ನೀರಾವರಿ ಯೋಜನೆ ಕುರಿತು ಪ್ರಶ್ನಿಸಬೇಕು ಎಂದು ಹೇಳಿದರು.
ಹೈದ್ರಾಬಾದ್ ಕರ್ನಾಟಕ ಪ್ರದೇಶಾಭಿವೃದ್ದಿ ಮಂಡಳಿ ರಚನೆಯಾಗಬೇಕು ಎಂದು ರಾಜಿನಾಮೆ ನೀಡಿದ ವೈಜನಾಥ ಪಾಟೀಲರು ಆದರ್ಶವಾದರು. ಆದರೆ, ಜನಸೇವೆಯಿಂದ ಪಕ್ಷಾಂತರ ಮಾಡಿರುವೆ ಎಂದು ಹೇಳುವ ಕರಡಿ ಸಂಗಣ್ಣ ಈ ಹಿಂದೆ ಸಂಸದರಾಗಿದ್ದಾಗ ಮೋದಿ ಅವರ ಕೇಂದ್ರ ಬಜೆಟ್ನಲ್ಲಿ ಕೃಷ್ಣ ಬಿಸ್ಕೀಂಗೆ ಅನುದಾನ ಮಂಜೂರು ಮಾಡಲಿಲ್ಲ ಆಗ ಪ್ರತಿಭಟಿಸಿ ರಾಜಿನಾಮೆ ನೀಡಿದ್ದರೆ ಹೀರೋ ಆಗುತಿದ್ದರು. ಬಿಜೆಪಿಯಲ್ಲಿ ಟಿಕೇಟ್ ಸಿಗಲಿಲ್ಲ ಎಂದು ಆಮಿಷಕ್ಕೆ ಒಳಗಾಗಿ ಕಾಂಗ್ರೆಸ್ ಸೇರಿದ ಸಂಗಣ್ಣ ಕರಡಿ’ ಜನರ ಮುಂದೆ ಜನಸೇವೆಯಿಂದ ಪಕ್ಷಾಂತರ ಮಾಡಿರುವೆ ಎಂದು ಸುಳ್ಳು ಹೇಳುತಿದ್ದಾರೆ ಎಂದು ಹೇಳಿದರು.
ಎಲ್ಲಾ ರಾಜಕಾರಣಿಗಳು ಹೋರಾಟದ ಕಿಚ್ಚು ಬೆಳೆಸಿಕೊಳ್ಳಬೇಕು, ಹೋರಾಟದ ರೂಪುರೇಶೆಗಳನ್ನು ಹಾಕಿಕೊಳ್ಳಬೇಕು, ಯುವಜನರ, ವಿದ್ಯಾರ್ಥಿಗಳ ಭವಿಷ್ಯ ರೂಪಿಸಿಕೊಳ್ಳಬೇಕಾದರೆ ಹೋರಾಟದ ಮಹತ್ವ ಪಡೆದುಕೊಳ್ಳಬೇಕು. ಹೈದರಾಬಾದ್ ಕರ್ನಾಟಕ ವಿಶೇಷ ಸ್ಥಾನಮಾನಕ್ಕೇ ಅನ್ಯಾಯವಾಗುತ್ತಿದೆ. ನೇಮಕಾತಿಯಲ್ಲಿ, ಬಡ್ತಿಯಲ್ಲಿ ತೊಂದರೆಯಾಗುತಿದ್ದು ಅದರಬಗ್ಗೆ ಖಾಳಜಿ ವಹಿಸಿ ಎಂದು ಗಂಗಾಧರ ಕುಷ್ಟಗಿ ಮನವಿ ಮಾಡಿದರು.
ಈ ವೇಳೆ ಪುರಸಭೆ ಸದಸ್ಯ ಜಯತೀರ್ಥ ಆಚಾರ ಇದ್ದರು.
ಹೈದರಾಬಾದ್ ಕರ್ನಾಟಕ ಭಾಗದ ಅಭಿವೃದ್ಧಿ ಹಾಗೂ ಈ ಭಾಗದ ಅಭ್ಯರ್ಥಿಗಳ ನೇಮಕಾತಿ ತಡೆಯೊಡ್ಡಲು ಕಾನೂನು ಸಚಿವ ಎಚ್.ಕೆ. ಪಾಟೀಲ್ ಪತ್ರದಿಂದ ಅನ್ಯಾಯವಾಗುತ್ತಿದೆ. ಈ ವಿಷಯದಲ್ಲಿ ರಾಜ್ಯಪಾಲರು ಮಧ್ಯಸ್ಥಿಕೆವಹಿಸಿ ಯಾವುದೇ ರೀತಿಯ ಅನ್ಯಾಯವಾಗದಂತೆ ನೋಡಿಕೊಳ್ಳಲು ರಾಜ್ಯಪಾಲರಿಗೆ ಪತ್ರ ಬರೆಯುತ್ತೇನೆ.
– ಗಂಗಾಧರ ಹೆಚ್. ಕುಷ್ಟಗಿ, ಹೈ.ಕ. 371ಜೆ ಹೋರಾಟ ಸಮಿತಿ ರಾಜ್ಯ ಕಾರ್ಯದರ್ಶಿ.