ಕೊಪ್ಪಳ ಲೋಕಸಭಾ ಚುನಾವಣೆ : ಮತ ಚಲಾಯಿಸಿ ಗೆಲುವಿನ ನಗೆ ಬೀರಿದ ಅಭ್ಯರ್ಥಿಗಳು

ಸಂಗಮೇಶ ಮುಶಿಗೇರಿ

ಕೃಷಿಪ್ರಿಯ ನ್ಯೂಸ್ |

ಕೊಪ್ಪಳ : ಕೊಪ್ಪಳ ಲೋಕಸಭಾ ಕ್ಷೇತ್ರದ ಚುನಾವಣೆಯ ಮತದಾನ ಪ್ರಕ್ರಿಯೆ ಎಂಟೂ ವಿಧಾನಸಭಾ ಕ್ಷೇತ್ರಗಳಲ್ಲಿ ಮೇ 7 ಮಂಗಳವಾರ ಬೆಳಿಗ್ಗೆ 7 ಗಂಟೆಗೆ ಆರಂಭವಾಯಿತು.

ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಕೊಪ್ಪಳ, ಸಿಂಧನೂರು, ಮಸ್ಕಿ, ಕುಷ್ಟಗಿ, ಗಂಗಾವತಿ, ಕನಕಗಿರಿ, ಯಲಬುರ್ಗಾ, ಸಿರಗುಪ್ಪಾ ವಿಧಾನಸಭಾ ಕ್ಷೇತ್ರಗಳಲ್ಲಿ ಬೆಳಿಗ್ಗೆ ಎಂಟು ಗಂಟೆಯಿಂದಲೇ ಏರಿಕೆ ಕಂಡ ಬಿಸಿಲಿನ ಪ್ರಖರತೆಯ ನಡುವೆಯೂ ಮತದಾರ ಮತಗಟ್ಟೆಗಳಿಗೆ ತೆರಳಿ ತಮ್ಮ ಹಕ್ಕು ಚಲಾಯಿಸಿದರು. ತಾಪಮಾನ ಏರಿಕೆಯಾಗುತಿದ್ದಂತೆ ಮತಗಟ್ಟೆಗಳಿಗೆ ತೆರಳುವವರ ಸಂಖ್ಯೆ ಕಡಿಮೆ ಕಂಡುಬಂತು. ಮಧ್ಯಾಹ್ನ ಒಂದು ಗಂಟೆ ಸುಮಾರಿಗೆ ಮತದಾನ ಪ್ರಮಾಣ ಶೇ.42.74 ರಷ್ಟು ಆಗಿದೆ ಎಂದು ಚುನಾವಣಾಧಿಕಾರಿಗಳು ಮಾಹಿತಿ ನೀಡಿದರು.

ಬಿಜೆಪಿ ಅಭ್ಯರ್ಥಿ ಡಾ.ಬಸವರಾಜ ಕ್ಯಾವಟರ್ ಅವರು ತಮ್ಮ ಸ್ವಕ್ಷೇತ್ರ ಕುಷ್ಟಗಿ ಪಟ್ಟಣದಲ್ಲಿ ಇಂದು ಬೆಳಿಗ್ಗೆ ತಂದೆ ತಾಯಿ ಆಶೀರ್ವಾದ ಪಡೆದು ವಿದ್ಯಾನಗರದ ಮತಗಟ್ಟೆಗೆ ಆಗಮಿಸಿ ತಮ್ಮ ತಂದೆಯವರಾದ ಮಾಜಿ ಶಾಸಕ ಕೆ.ಶರಣಪ್ಪ ಅವರ ಜೊತೆಗೂಡಿ ಮತ ಚಲಾಯಿಸಿದರು. ಬಳಿಕ ಶಾಯಿ ಪ್ರದರ್ಶನ ಮಾಡಿ ಗೆಲುವಿನ ನಗೆ ಬೀರಿದರು.

ಇತ್ತ ಕಾಂಗ್ರೆಸ್ ಅಭ್ಯರ್ಥಿ ರಾಜಶೇಖರ ಹಿಟ್ನಾಳ ಅವರು ತಮ್ಮ ಸ್ವಗ್ರಾಮ ಹಿಟ್ನಾಳ ಗ್ರಾಮದ ಗ್ರಾಮ ಪಂಚಾಯಿತಿ ಕಚೇರಿಯ ಮತಗಟ್ಟೆಗೆ ಆಗಮಿಸಿ ಮತ ಚಲಾಯಿಸಿದ ಬಳಿಕ ಶಾಯಿ ಹಾಕಿದ ಬೆರಳು ಪ್ರದರ್ಶಿಸುವ ಮೂಲಕ ಗೆಲುವಿನ ನಗೆ ಬೀರಿದರು.

ತಮ್ಮ ಅಭ್ಯರ್ಥಿಗಳನ್ನು ಶತಾಯಗತಾಯವಾಗಿ ಅತಿಹೆಚ್ಚು ಬಹುಮತಗಳ ಅಂತರದಿಂದ ಗೆಲ್ಲಿಸಬೇಕು ಎಂದು ಈ ಚುನಾವಣೆಯನ್ನು ಪ್ರತಿಷ್ಟೆಯಾಗಿ ತೆಗೆದುಕೊಂಡಿದ್ದ ಹಾಲಿ ಮತ್ತು ಮಾಜಿ ಶಾಸಕರುಗಳು ಕುಷ್ಟಗಿ ವಿಧಾನಸಭಾ ಕ್ಷೇತ್ರದಲ್ಲಿ ಭರ್ಜರಿ ಪ್ರಚಾರ ಕೈಗೊಂಡಿದ್ದರು. ಇಂದು ಕಾಂಗ್ರೆಸ್ನ ಕೊಪ್ಪಳ ಜಿಲ್ಲಾಧ್ಯಕ್ಷ ಹಾಗೂ ಮಾಜಿ ಶಾಸಕ ಅಮರೇಗೌಡ ಪಾಟೀಲ್ ಬಯ್ಯಾಪೂರ ಅವರು ಕೃಷ್ಣಗಿರಿ ಕಾಲೋನಿಯ ಮತಕೇಂದ್ರಕ್ಕೆ ತಮ್ಮ ಧರ್ಮ ಪತ್ನಿಯೊಂದಿಗೆ ತೆರಳಿ ಮತ ಚಲಾಯಿಸಿದರು.

ಇತ್ತ ವಿಧಾನಸಭಾ ವಿರೋಧ ಪಕ್ಷದ ಮುಖ್ಯ ಸಚೇತಕ ಹಾಗೂ ಶಾಸಕ ದೊಡ್ಡನಗೌಡ ಎಚ್. ಪಾಟೀಲ್ ಅವರು ತಮ್ಮ ಸ್ವಗ್ರಾಮ ಕೊರಡಕೇರಾದ ಮತಗಟ್ಟೆಯಲ್ಲಿ ತಮ್ಮ ತಾಯಿ ಮತ್ತು ಧರ್ಮ ಪತ್ನಿ ಜೊತೆಗೂಡಿ ಮತ ಚಲಾಯಿಸಿದರು.

ಕೃಷಿ ಉತ್ಪನ್ನ ಮಾರುಕಟ್ಟೆಯ ಮತದಾನ ಕೇಂದ್ರದಲ್ಲಿ ಸ್ಥಳೀಯ ಮದ್ಧಾನಿ ಹಿರೇಮಠ ಕರಿಬಸವೇಶ್ವರ ಶಿವಾಚಾರ್ಯ ಸ್ವಾಮೀಜಿ ಮತ ಚಲಾಯಿಸಿದರು.

ಅದೇರೀತಿ ನಿಡಶೇಸಿ ಗ್ರಾಮದಲ್ಲಿ ಅಭಿನವ ಕರಿಬಸವೇಶ್ವರ ಸ್ವಾಮೀಜಿ ಅವರು ಮತ ಚಲಾಯಿಸಿದರು.