ಸಂಗಮೇಶ ಮುಶಿಗೇರಿ
ಕೃಷಿಪ್ರಿಯ ನ್ಯೂಸ್ |
ಕೊಪ್ಪಳ : ಜಿಲ್ಲೆಯ ಕುಷ್ಟಗಿ ತಾಲೂಕಿನ ತಾವರಗೇರಾ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಅಮಾನತ್ತು ಮಾಡದಿದ್ದರೆ ಮತದಾನದಿಂದ ದೂರ ಉಳಿಯುವುದಾಗಿ ಪಟ್ಟು ಹಿಡಿದಿದ್ದ ವಿಠಲಾಪೂರದ ನಿವಾಸಿಗಳ ಮನವೊಲಿಸುಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ.
18ನೇ ವಾರ್ಡಿನ ವಿಠಲಾಪೂರದ ಲಕ್ಷ್ಮೀ ನೇಮಿನಾಥ ಮುಗುದುಮ್ (20) ಎಂಬ ಗರ್ಭಿಣಿ ಏ.30ರಂದು ಸಮುದಾಯ ಆರೋಗ್ಯ ಕೇಂದ್ರಕ್ಕೆ ಹೆರಿಗೆಗಾಗಿ ದಾಖಲಾಗಿ ಅಸುನೀಗಿದ್ದಳು. ಗರ್ಭಿಣಿ ಸಾವಿಗೆ ವೈದ್ಯಾಧಿಕಾರಿ ಡಾ.ಕಾವೇರಿ ಶಾವಿ ಅವರ ನಿರ್ಲಕ್ಷ್ಯವೇ ಕಾರಣವೆಂದು ಆರೋಪಿಸಿ ವಿಠಲಾಪೂರದ ನಿವಾಸಿಗಳು ಪ್ರತಿಭಟನೆ ನಡೆಸಿ ವೈದ್ಯಾಧಿಕಾರಿಯನ್ನು ಕರ್ತವ್ಯದಿಂದ ಅಮಾನತ್ತುಗೊಳಿಸಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಒತ್ತಾಯಿಸಿದ್ದರು. ಅಮಾನತ್ತುಗೊಳಿಸದಿದ್ದರೆ ಲೋಕಸಭಾ ಚುನಾವಣೆ ಮತದಾನ ಬಹಿಷ್ಕಾರ ಮಾಡುವುದಾಗಿ ಎಚ್ಚರಿಸಿದ್ದರು. ಅಂದು ಪ್ರತಿಭಟನಾ ಸ್ಥಳಕ್ಕೆ ತಹಸೀಲ್ದಾರ್, ಡಿವೈಎಸ್ಪಿ, ಸಿಪಿಐ ಸೇರಿದಂತೆ ತಾಲೂಕುಮಟ್ಟದ ಅಧಿಕಾರಿಗಳು ಭೇಟಿ ನೀಡಿ ಈ ವಿಷಯ ಕುರಿತು ಜಿಲ್ಲಾಧಿಕಾರಿಗಳಿಗೆ ವರದಿ ಕಳುಹಿಸಲಾಗಿದೆ ಚುನಾವಣೆ ಮುಗಿದ ನಂತರ ತನಿಖೆ ಮಾಡಿ ವೈದ್ಯಾಧಿಕಾರಿ ಮೇಲೆ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ ಪ್ರತಿಭಟನೆ ಹಿಂಪಡೆಯುವಂತೆ ಮನವಲಿಸಲು ಮುಂದಾಗಿದ್ದರು.
ಆದರೆ, ಇಂದು ಮಂಗಳವಾರ ಬೆಳಿಗ್ಗೆ ಆರಂಭಗೊಂಡ ಚುನಾವಣೆಯಲ್ಲಿ ವಿಠಲಾಪೂರದ ಮತದಾರರು ತಮ್ಮ ಹಕ್ಕು ಚಲಾಯಿಸಲು ಮತಗಟ್ಟೆ ಬಳಿ ಸುಳಿಯಲಿಲ್ಲ. ವಿಷಯ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಮತದಾನ ನೋಂದಣಾಧಿಕಾರಿ, ತಹಸೀಲ್ದಾರ್ ರವಿ ಎಸ್. ಅಂಗಡಿ, ತಾಲೂಕು ಸ್ವಿಪ್ ಸಮಿತಿ ಅಧ್ಯಕ್ಷ, ತಾ.ಪಂ. ಇಒ ನಿಂಗಪ್ಪ ಎಸ್. ಮಸಳಿ, ಸಿಪಿಐ ಯಶವಂತ ಬಿಸನಳ್ಳಿ, ಕಂದಾಯ ನಿರೀಕ್ಷಕ ಶರಣಪ್ಪ ದಾಸರ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ನಬಿಸಾಬ ಖುದಾನ್ನವರ ಸೇರಿದಂತೆ ಮತ್ತಿತರ ಅಧಿಕಾರಿಗಳು ಮತದಾನ ಮಾಡುವಂತೆ ಎಷ್ಟೇ ಮನವೊಲಿಸಲು ಮುಂದಾದರೂ ಪ್ರಯೋಜನವಾಗಲಿಲ್ಲ ಎಂಬುದು ತಿಳಿದುಬಂತು. ವಿಠಲಾಪೂರದ ಸುಮಾರು 420 ಪುರುಷ ಮತದಾರರು, 440 ಮಹಿಳಾ ಮತದಾರರು ಸೇರಿ ಒಟ್ಟು 860 ಮತದಾರರು ತಮ್ಮ ಹಕ್ಕು ಚಲಾಯಿಸದೇ ಚುನಾವಣೆ ಬಹಿಷ್ಕಾರ ಮಾಡಿದ್ದಾರೆ. ಆದರೆ, ಇಲ್ಲಿನ ಮತಕೇಂದ್ರಕ್ಕೆ ನಿಯೋಜನೆಗೊಂಡ 10 ಜನ ಸಿಬ್ಬಂದಿ ಮಾತ್ರ ಮತ ಚಲಾಯಿಸಿದ್ದಾರೆ ಎಂದು ಚುನಾವಣೆ ಮೂಲಗಳಿಂದ ತಿಳಿದು ಬಂದಿದೆ.
ವಿಠಲಾಪೂರ ನಿವಾಸಿಗಳ ಬಳಿ ಅವರ ಬೇಡಿಕೆ ಈಡೇರಿಸಲು ನಮ್ಮ ಅಧಿಕಾರಿಗಳು ಸಾಕಷ್ಟು ಬಾರಿ ಚರ್ಚೆ ನಡೆಸಿ ಕಾಲಾವಕಾಶ ಕೇಳಿದ್ದರು. ಬಳಿಕ ನಿವಾಸಿಗಳು ಚುನಾವಣೆ ಬಹಿಷ್ಕಾರ ಹೇಳಿಕೆ ಹಿಂಪಡೆದು ಮತ ಚಲಾಯಿಸಲು ಒಪ್ಪಿಗೆ ನೀಡಿದ್ದರು. ಆದರೆ, ಏಕಾಏಕಿ ಚುನಾವಣೆ ದಿನದಂದು ಮತದಾನ ಪ್ರಕ್ರಿಯೆಯಿಂದ ನಿವಾಸಿಗಳು ಹಿಂದೇಟು ಹಾಕಿರುವುದು ಅಚ್ಚರಿ ತಂದಿದೆ “
– ನಳೀನ್ ಆತುಲ್,
ಜಿಲ್ಲಾಧಿಕಾರಿ/ ಜಿಲ್ಲಾ ಚುನಾವಣಾಧಿಕಾರಿ, ಕೊಪ್ಪಳ.