ಸಂಗಮೇಶ ಮುಶಿಗೇರಿ
ಕೃಷಿಪ್ರಿಯ ನ್ಯೂಸ್ |
ಕೊಪ್ಪಳ: ಪ್ರಸಕ್ತ ವರ್ಷದ ಫೆಬ್ರವರಿ 7ರಿಂದ ಏಪ್ರಿಲ್ 6ರ ನಡುವೆ ನಡೆದ ಡಿಜಿಟಲ್ ಹೆಲ್ತ್ ಮ್ಯಾರಥಾನ್‌ನಲ್ಲಿ ಜಿಲ್ಲೆಯ ಕುಷ್ಟಗಿ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆ ಟಾಪ್ 10 ಸ್ಥಾನ ಪಡೆದುಕೊಳ್ಳುವ ಮೂಲಕ ಅತ್ಯುತ್ತಮ ಸಾಧನೆ ಮಾಡಿದೆ.
ಈ ಕುರಿತು ಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್ ರಾಜ್ಯ ಮಿಷನ್ ನಿರ್ದೇಶಕ ರಣದೀಪ್ ಡಿ. ಐಎಎಸ್ ಅಧಿಕಾರಿ ಮೇ 6 ರಂದು ಆದೇಶ ಹೊರಡಿಸಿದ್ದು, ಇಲ್ಲಿಯ ಆಸ್ಪತ್ರೆ ಆಡಳಿತಾಧಿಕಾರಿ ತಜ್ಞವೈದ್ಯ ಡಾ.ಕೆ.ಎಸ್. ರೆಡ್ಡಿ ಅವರ ಈ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹೆಲ್ತ್ ಮ್ಯಾರಥಾನ್ ಅವಧಿಯಲ್ಲಿ ಆಸ್ಪತ್ರೆಯಿಂದ 5347 ಆರೋಗ್ಯ ದಾಖಲೆಗಳನ್ನು ಲಿಂಕ್ ಮೂಲಕ 10478 ಸ್ಕ್ಯಾನ್ ಮತ್ತು ಶೇರ್ ಟೋಕನ್‌ಗಳನ್ನು ರಚಿಸುವ ಮೂಲಕ ಡಿಜಿಟಲ್ ಆರೋಗ್ಯ ಉಪಕ್ರಮಗಳನ್ನು ಮುನ್ನಡೆಸಿದೆ. ಕಠಿಣ ಪರಿಶ್ರಮ, ಬದ್ಧತೆ ಮತ್ತು ವೃತ್ತಿಪರತೆಯನ್ನು ಪ್ರಶಂಸಿಸಲಾಗುತ್ತದೆ. ನಿಮ್ಮ ನಿರಂತರ ಪ್ರಯತ್ನದಿಂದ ಮುಂದಿನ ದಿನಗಳಲ್ಲಿ ಕರ್ನಾಟಕ ಎಬಿಡಿಎಂನಲ್ಲಿ ಇನ್ನೂ ಹೆಚ್ಚಿನ ಯಶಸ್ಸನ್ನು ಸಾಧಿಸಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ರಾಜ್ಯ ಮಿಷನ್ ಡೈರೆಕ್ಟರ್, ABDM ಕಛೇರಿಯಿಂದ ಶುಭಾಶಯ ತಿಳಿಸುವ ಜೊತೆಗೆ ರಾಜ್ಯದಲ್ಲಿ ಆರೋಗ್ಯ ಸೇವೆಗಳ ಡಿಜಿಟಲೀಕರಣದ ಗುರಿಯನ್ನು ಹೆಚ್ಚಿಸಲು ಆಸ್ಪತ್ರೆ ಆಡಳಿತಾಧಿಕಾರಿ ತಜ್ಞವೈದ್ಯ ಡಾ.ಕೆ.ಎಸ್. ರೆಡ್ಡಿ ಅವರ ಬೆಂಬಲವನ್ನು ಕೋರಿದ್ದಾರೆ.
ಈ ಸಾಧನೆಗೆ ತಜ್ಞವೈದ್ಯ ಡಾ. ಕೆ.ಎಸ್. ರೆಡ್ಡಿ ಸೇರಿದಂತೆ ಆಸ್ಪತ್ರೆ ವೈದ್ಯರು, ಆರೋಗ್ಯ ಸಿಬ್ಬಂದಿಯೊಂದಿಗೆ ಆರೋಗ್ಯ ರಕ್ಷಾ ಸಮಿತಿ ಸದಸ್ಯರು ಸಹ ಹರ್ಷ ವ್ಯಕ್ತಪಡಿಸಿದ್ದಾರೆ.