ಸಂಗಮೇಶ ಮುಶಿಗೇರಿ
ಕೃಷಿಪ್ರಿಯ ನ್ಯೂಸ್ |
ಕುಷ್ಟಗಿ : ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಶುಕ್ರವಾರ ಬೆಳಿಗ್ಗೆ ಸಾಂಸ್ಕೃತಿಕ ನಾಯಕ, ವಿಶ್ವಗುರು ಬಸವಣ್ಣ ಹಾಗೂ ಮಹಾ ಸಾದ್ವಿ ಹೇಮರಡ್ಡಿ ಮಲ್ಲಮ್ಮ ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು.
ವಿವಿಧ ಸರ್ಕಾರಿ ಕಚೇರಿ, ಗ್ರಾಮ ಪಂಚಾಯಿತಿ ಕಚೇರಿ, ಶಾಲಾ-ಕಾಲೇಜುಗಳಲ್ಲಿ ಹಾಗೂ ಸಾರ್ವಜನಿಕ ಆಸ್ಪತ್ರೆ, ಪೊಲೀಸ್ ಇಲಾಖೆ, ಅಗ್ನಿಶಾಮಕ ಠಾಣೆ ಸೇರಿದಂತೆ ಸಂಘ-ಸಂಸ್ಥೆಗಳು ಹಾಗೂ ವಿವಿಧೆಡೆ ಹಲವು ಗಣ್ಯರು ಸಾಂಸ್ಕೃತಿಕ ನಾಯಕ, ವಿಶ್ವಗುರು ಬಸವಣ್ಣ ಹಾಗೂ ಮಹಾ ಸಾದ್ವಿ ಹೇಮರಡ್ಡಿ ಮಲ್ಲಮ್ಮ ಅವರ ಭಾವಚಿತ್ರ ಪೂಜಿಸಿ ಪುಷ್ಪಾರ್ಪಣೆ ಮಾಡಿ ಗೌರವಿಸಿದರು.
ಪಟ್ಟಣದ ತಹಸೀಲ್ದಾರ್ ಕಾರ್ಯಾಲಯ ಸಭಾಂಗಣದಲ್ಲಿ ತಾಲೂಕಾಡಳಿತ ವತಿಯಿಂದ ಸಾಂಸ್ಕೃತಿಕ ನಾಯಕ, ವಿಶ್ವಗುರು ಬಸವಣ್ಣ ಹಾಗೂ ಮಹಾ ಸಾದ್ವಿ ಹೇಮರಡ್ಡಿ ಮಲ್ಲಮ್ಮ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪ ಸಮರ್ಪಿಸಿ ಗೌರವ ಸಲ್ಲಿಸಲಾಯಿತು.
ತಹಸೀಲ್ದಾರ್ ರವಿ ಎಸ್. ಅಂಗಡಿ ಅವರು ಮಾತನಾಡಿ, 12ನೇ ಶತಮಾನದಲ್ಲಿ ಬಸವಣ್ಣನವರು ವಚನಗಳ ಮೂಲಕ ನೀಡಿದ ಸಮಾನತೆ, ಕಾಯಕತತ್ವ, ದಾಸೋಹ ತತ್ವ ಮುಂತಾದ ಅವರ ವಿಚಾರಧಾರೆಗಳು ಸರ್ವಕಾಲಕ್ಕೂ ಪ್ರಸ್ತುತವಾಗಿವೆ. 14ನೇ ಶತಮಾನದ ಸ್ತ್ರೀಕುಲದ ದೇವತೆ ಹೇಮರಡ್ಡಿ ಮಲ್ಲಮ್ಮ ನವರು ತಮ್ಮ ಬದುಕಿನಲ್ಲಿ ಎದುರಿಸಿದ ಸಂಕಷ್ಟಗಳನ್ನೇ ಸಾಧನೆಯ ಮೆಟ್ಟಿಲುಗಳನ್ನಾಗಿ ಬದಲಾಯಿಸಿ ಸಮಾಜದ ಒಳಿತಿಗೆ ಶ್ರಮಿಸಿದರು. ಬಸವಣ್ಣನವರ ಹಾಗೂ ಹೇಮರಡ್ಡಿ ಮಲ್ಲಮ್ಮ ರವರ ಜೀವನ ಸಂದೇಶಗಳು ಇಂದಿಗೂ ಪ್ರಸ್ತುತ, ಅನುಕರಣೀಯವಾಗಿದೆ ಅವರ ತತ್ವ ಆದರ್ಶ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಶರಣ ಚಿಂತಕ ಡಾ.ಶಿವಲಿಂಗಪ್ರಭು ಸುಂಕದ ಅವರು ಮಾತನಾಡಿ, ಬಸವಾದಿ ಶರಣರು ಹಾಕಿಕೊಟ್ಟ ಮಾರ್ಗವು ಪ್ರತಿಯೊಬ್ಬರಿಗೂ ರಾಜಮಾರ್ಗವಾಗಿದೆ. ಅವರು ರಚಿಸಿರುವ ವಚನಗಳು ವೈಜ್ಞಾನಿಕತೆಯಿಂದ ಕೂಡಿದ್ದು, ಅವುಗಳನ್ನು ಅರ್ಥೈಸಿಕೊಂಡಾಗ ಮಾತ್ರ ಜೀವನ ಸಾರ್ಥಕವಾಗುತ್ತದೆ ಎಂದು ಹೇಳಿದರು.
ಈ ವೇಳೆ ಮಾಜಿ ಶಾಸಕ ಕೆ.ಶರಣಪ್ಪ ವಕೀಲರು, ಬಸವ ಸಮಿತಿಯ ಅಧ್ಯಕ್ಷ ಶಿವಸಂಗಪ್ಪ ಬಿಜಕಲ್, ಕಾರ್ಯದರ್ಶಿ ಮಹೇಶ ಜಿ.ಹೆಚ್., ಜಾಗತಿಕ ಲಿಂಗಾಯತ ಮಹಾಸಭಾ ತಾಲೂಕಾಧ್ಯಕ್ಷ ಟಿ.ಬಸವರಾಜ, ಶಿವಪುತ್ರಪ್ಪ ಸುಂಕದ, ರಾಮನಗೌಡ ಪಾಟೀಲ್, ಜೆ.ಶರಣಪ್ಪ, ಸೋಮನಗೌಡ ಪಾಟೀಲ್, ಎಮ್.ಎಮ್. ಮಹಲಿಂಗಪೂರ, ಶಿವಮ್ಮ ಸಜ್ಜನ, ಸರೋಜಿನಿ, ಕಸಾಪ ತಾಲೂಕಾಧ್ಯಕ್ಷ ವೀರೇಶ ಬಂಗಾರಶೆಟ್ಟರ್, ಶಿವಾಜಿ ಹಡಪದ, ಗ್ರೇಡ್-2 ತಹಸೀಲ್ದಾರ್ ಮುರಳೀಧರ ಮುಕ್ತೇದಾರ, ಉಪತಹಸೀಲ್ದಾರ ಸತೀಶ ಗಾಂಡಿಗಾರಿ, ಚಂದ್ರು ಪೂಜಾರಿ ಸೇರಿದಂತೆ ಕಂದಾಯ ಇಲಾಖೆ ಸಿಬ್ಬಂದಿ ಹಾಗೂ ತಾಲೂಕು ಬಸವ ಸಮಿತಿ ಪದಾಧಿಕಾರಿಗಳು, ಬಸವಾಭಿಮಾನಿಗಳು ಇದ್ದರು.
ಇಲ್ಲಿಯ ಸರ್ಕಾರಿ ಪ್ರಥಮದರ್ಜೆ ಕಾಲೇಜು ಮಹಾ ವಿದ್ಯಾಲಯದಲ್ಲಿ ಪ್ರಾಚಾರ್ಯ ಡಾ.ಎಸ್.ವೀ. ಡಾಣಿ ಅವರು ಸಾಂಸ್ಕೃತಿಕ ನಾಯಕ, ವಿಶ್ವಗುರು ಬಸವಣ್ಣ ಹಾಗೂ ಮಹಾ ಸಾದ್ವಿ ಹೇಮರಡ್ಡಿ ಮಲ್ಲಮ್ಮ ಅವರ ಭಾವಚಿತ್ರ ಪೂಜಿಸಿ ಕಾಲೇಜು ಉಪನ್ಯಾಸಕ ವೃಂದ ಹಾಗೂ ವಿದ್ಯಾರ್ಥಿಗಳೊಂದಿಗೆ ಪುಷ್ಪ ಸಮರ್ಪಿಸಿ ಗೌರವಿಸಿದರು.
ಲೋಕಸಭಾ ಚುನಾವಣೆ ಹಿನ್ನೆಲೆ ನೀತಿಸಂಹಿತೆ ಜಾರಿಯಲ್ಲಿರುವುದರಿಂದ ಕುಷ್ಟಗಿ ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಸಾಂಸ್ಕೃತಿಕ ನಾಯಕ, ವಿಶ್ವಗುರು ಬಸವಣ್ಣ ಹಾಗೂ ಮಹಾ ಸಾದ್ವಿ ಹೇಮರಡ್ಡಿ ಮಲ್ಲಮ್ಮ ಅವರ ಜಯಂತಿ ಆಚರಣೆ ಕಾರ್ಯಕ್ರಮವನ್ನು ಸರಳವಾಗಿ ಆಚರಿಸಿರುವುದು ಕಂಡುಬಂತು.