ಬಸವ ಜಯಂತಿ : ಗಮನ ಸೆಳೆದ ಎತ್ತುಗಳ ಮೆರವಣಿಗೆ

ಸಂಗಮೇಶ ಮುಶಿಗೇರಿ

ಕೃಷಿಪ್ರಿಯ ನ್ಯೂಸ್ |

ಕೊಪ್ಪಳ : ಜಗಜ್ಯೋತಿ, ಸಾಂಸ್ಕೃತಿಕ ನಾಯಕ ಬಸವಣ್ಣನವರ ಜಯಂತಿಯನ್ನು ಜಿಲ್ಲೆಯ ಕುಷ್ಟಗಿ ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಸಂಭ್ರಮದಿಂದ ಎತ್ತುಗಳ ಮೆರವಣಿಗೆ ಮಾಡಿ ವಿಶೇಷವಾಗಿ ಆಚರಿಸಿದ್ದು ಗಮನ ಸೆಳೆಯಿತು.

ಪಟ್ಟಣದ ನಾಯಕವಾಡಿ ಓಣಿಯ ಶ್ರೀ ಮಲ್ಲಿಕಾರ್ಜುನ ದೇವಸ್ಥಾನಲ್ಲಿ ಬೆಳಿಗ್ಗೆ ವಿಶೇಷ ಪೂಜಾ ಕೈಂಕರ್ಯಗಳು ಜರುಗಿದವು. ಸಂಜೆ 5.30ರ ಸುಮಾರಾಗಿ ರೈತರು ತಮ್ಮ ತಮ್ಮ ಜೋಡೆತ್ತುಗಳಿಗೆ ಬಣ್ಣ ಬಳಿದು’ ಬಣ್ಣದ ಹುಲಾನು, ರಿಬ್ಬನ್, ಬಲೂನು, ಅಲಂಕಾರಿಕ ವಸ್ತುಗಳು ಹಾಗೂ ಗೆಜ್ಜೆಗಳನ್ನು ಕಟ್ಟಿಕೊಂಡು ದೇವಸ್ಥಾನಕ್ಕೆ ಕರೆತಂದಿದ್ದರು. ನಂತರ ಕುಷ್ಟಗಿ, ನಿಡಶೇಸಿ, ಗೆಜ್ಜೆಬಾವಿ ಶ್ರೀಮಠದ ಅಭಿನವ ಕರಿಬಸವೇಶ್ವರ ಸ್ವಾಮೀಜಿ ಅವರಿಂದ ಮೆರವಣಿಗೆಗೆ ಚಾಲನೆ ದೊರೆಯಿತು.

ಜಗಜ್ಯೋತಿ, ಸಾಂಸ್ಕೃತಿಕ ನಾಯಕ ಬಸವಣ್ಣನವರ ಭಾವಚಿತ್ರ ಹಾಗೂ ಉತ್ಸವ ನಂದಿ ಮೂರ್ತಿ ಇರಿಸಿದ ಜೋಡೆತ್ತಿನ ಬಂಡಿಯ ಮೆರವಣಿಗೆ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಿಂದ ಆರಂಭಗೊಂಡು ಭಾಗ್ಯದ ಆಂಜನೇಯ ದೇವಸ್ಥಾನ ಮಾರ್ಗವಾಗಿ ಕೋಕಿಲ ವೃತ್ತ, ಮಹರ್ಷಿ ವಾಲ್ಮೀಕಿ ವೃತ್ತ, ಪುರಸಭೆ ಹಾಗೂ ಶ್ರೀ ಕಟ್ಟಿದುರ್ಗಾದೇವಿ ದೇವಸ್ಥಾನ, ಹಳೇಬಜಾರ ಶ್ಯಾಮೀದಲಿ ಕಟ್ಟಿ ಮುಖಾಂತರ ದೇವಸ್ಥಾನ ತಲುಪಿತು. ಮೆರವಣಿಗೆಯುದ್ದಕ್ಕೂ ರೈತರು, ಶ್ರೀಮಲ್ಲಿಕಾರ್ಜುನ ಭಜನಾ ಮಂಡಳಿಯವರು, ದೇವಸ್ಥಾನ ಸಮಿತಿಯವರು ರೈತಪದ, ಹಂತ್ತಿ ಪದಗಳು, ಬಸವಣ್ಣನವರ ವಚನಗಳನ್ನು ಹಾಡುತ್ತಾ ಹೆಜ್ಜೆ ಹಾಕಿದ್ದು ಸಾರ್ವಜನಿಕರ ಗಮನ ಸೆಳೆಯಿತು.

ಅದೇ ರೀತಿ ತಾಲೂಕಿನ ಹಿರೇಬನ್ನಿಗೋಳ, ಕುರುಬನಾಳ, ಹಿರೇಮನ್ನಾಪೂರ ಸೇರಿದಂತೆ ಹನುಮನಾಳ, ಹನುಮಸಾಗರ, ತಾವರಗೇರಾ ಹೋಬಳಿ ವ್ಯಾಪ್ತಿಯ ಗ್ರಾಮೀಣ ಪ್ರದೇಶಗಳಲ್ಲಿ ನಡೆಸಲಾದ ಅಲಂಕಾರಗೊಂಡ ಎತ್ತುಗಳ ಮೆರವಣಿಗೆಯಲ್ಲಿ ಸಾಲು ಸಾಲು ಎತ್ತುಗಳ ಗೆಜ್ಜೆಯ ಸಪ್ಪಳ ಮುದ ನೀಡಿತು. ಕಾಯಕವೇ ಕೈಲಾಸವೆಂದು ಸಾರಿದ ಜಗಜ್ಯೋತಿ ಬಸವಣ್ಣನವರ ಜಯಂತಿಯನ್ನು ವಿಶೇಷವಾಗಿ ಆಚರಿಸಿದ್ದು ರೈತ ವಲಯದ ಸಂಭ್ರಮಕ್ಕೆ ಈದಿನ ಸಾಕ್ಷಿಯಾಯಿತು.