ಸಿಡಿಲು ಬಡಿದು ಕುರಿಗಾಯಿ ಯುವಕ ಸಾವು

ಸಂಗಮೇಶ ಮುಶಿಗೇರಿ

ಕೃಷಿಪ್ರಿಯ ನ್ಯೂಸ್ |

ಕೊಪ್ಪಳ : ಸಿಡಿಲು ಬಡಿದು ಕುರಿಗಾಯಿ ಯುವಕನೋರ್ವ ಸಾವನ್ನಪ್ಪಿದ ಘಟನೆ ಜಿಲ್ಲೆಯ ಕುಷ್ಟಗಿ ತಾಲೂಕಿನ ಹಿರೇಮುಕರ್ತಿನಾಳ ಗ್ರಾಮದ ಹೊರವಲಯ ಶನಿವಾರ ಸಂಜೆ ನಡೆದಿದೆ.

ಗ್ರಾಮದ ಕನಕರಾಯ ತಂ. ನಾಗಪ್ಪ ಕಾಟಾಪೂರ (28) ಎಂದು ಗುರುತಿಸಲಾಗಿದೆ. ತಾವರಗೇರಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಗ್ರಾಮದ ಹೊರವಲಯ ಜಮೀನಿನಲ್ಲಿ ಕುರಿಗಳನ್ನು ಮೇಯಿಸುತ್ತಿದ್ದಾಗ ಗುಡುಗು, ಬಿರುಗಾಳಿ ಸಹಿತ ಮಳೆ ಆರಂಭವಾಗಿದೆ. ಮಳೆಯಿಂದ ರಕ್ಷಿಸಿಕೊಳ್ಳಲು ಹುಣಸೆ ಮರದ ಆಸರೆಗೆ ನಿಂತ ಸಂದರ್ಭದಲ್ಲಿ ಬೆನ್ನ ಹಿಂಭಾಗದಲ್ಲಿ ಸಿಡಿಲು ಬಡಿದು ಸ್ಥಳದಲ್ಲೇ ಯುವಕ ಮೃತಪಟ್ಟಿರುವುದಾಗಿ ಗ್ರಾಮಸ್ಥರು ತಿಳಿಸಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಭೇಟಿನೀಡಿ ಪರಿಶೀಲಿಸಿದ್ದಾರೆ.