ಸಿಡಿಲು ಬಡಿದು ಕುರಿಗಾಯಿ ಸಾವು : ₹5 ಲಕ್ಷ ಪರಿಹಾರ ವಿತರಣೆ

ಸಂಗಮೇಶ ಮುಶಿಗೇರಿ

ಕೃಷಿಪ್ರಿಯ ನ್ಯೂಸ್ |

ಕೊಪ್ಪಳ : ಜಿಲ್ಲೆಯ ಕುಷ್ಟಗಿ ತಾಲೂಕಿನ ಹಿರೇಮುಕರ್ತಿನಾಳ ಗ್ರಾಮದ ಹೊರವಲಯ ಜಮೀನಿನಲ್ಲಿ ಇಂದು ಶನಿವಾರ ಸಂಜೆ ಸಿಡಿಲು ಬಡಿದು ಮೃತಪಟ್ಟ ಕುರಿಗಾಯಿ ಕುಟುಂಬಕ್ಕೆ ತಾಲೂಕಾಡಳಿತದಿಂದ ₹5 ಲಕ್ಷ ಪರಿಹಾರ ವಿತರಿಸಲಾಗಿದೆ.

ಗ್ರಾಮದ ಕನಕರಾಯ ತಂ. ನಾಗಪ್ಪ ಕಾಟಾಪೂರ (28) ಸಿಡಿಲು ಬಡಿದು ಸ್ಥಳದಲ್ಲೇ ಮೃತಪಟ್ಟಿದ್ದರು. ಮೃತ ದುರ್ದೈವಿಗೆ ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿ ಇದ್ದರು ಎಂದು ತಿಳಿದುಬಂದಿದೆ. ಸ್ಥಳಕ್ಕೆ ಭೇಟಿ ನೀಡಿದ್ದ ಕಂದಾಯ ಇಲಾಖೆ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳು ಪರಿಶೀಲನೆ ಕಾರ್ಯನಡೆಸಿದ್ದರು. ನಂತರ ಮರಣೋತ್ತರ ಪರೀಕ್ಷೆ ಬಳಿಕ ಗ್ರೇಡ್-2 ತಹಸೀಲ್ದಾರ್ ಮುರಳೀಧರ ಮುಕ್ತೇದಾರ ಅವರು ಮೃತನ ಕುಟುಂಬಸ್ಥರಿಗೆ ಸಾಂತ್ವನ ಹೇಳಿ’ ಸ್ಥಳದಲ್ಲೇ ₹5 ಲಕ್ಷ ಮೊತ್ತದ ಪರಿಹಾರ ಚೆಕ್ ವಿತರಿಸಿದ್ದಾರೆ.

ಈ ವೇಳೆ ತಾವರಗೇರಾ ಪಿಎಸೈ, ಕಂದಾಯ ಇಲಾಖೆ ಆರ್.ಐ. ಶರಣಪ್ಪ ದಾಸರ, ಗ್ರಾಮ ಲೆಕ್ಕಾಧಿಕಾರಿ ವೆಂಕಟೇಶ ಆಚಾರಿ ಹಾಗೂ ಗ್ರಾಮಸ್ಥರು ಇದ್ದರು.