ಮಹರ್ಷಿ ಶ್ರೀ ಭಗೀರಥ ಜಯಂತಿ ಸರಳ ಆಚರಣೆ

ಸಂಗಮೇಶ ಮುಶಿಗೇರಿ

ಕೃಷಿಪ್ರಿಯ ನ್ಯೂಸ್ |

ಕುಷ್ಟಗಿ : ಲೋಕ ಕಲ್ಯಾಣಕ್ಕಾಗಿ ಶಿವನ ಜಟೆಯಲ್ಲಿರುವ ಗಂಗೆಯನ್ನೇ ಧರೆಗಿಳಿಸಿದ ಮಹರ್ಷಿ ಶ್ರೀ ಭಗೀರಥ ಜಯಂತಿ ಆಚರಣೆಯು ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಮಂಗಳವಾರ ಸರಳವಾಗಿ ಆಚರಿಸಲಾಯಿತು.

ಪಟ್ಟಣದ ತಹಸೀಲ್ದಾರ್ ಕಾರ್ಯಾಲಯ ಸಭಾಂಗಣದಲ್ಲಿ ತಾಲೂಕಾಡಳಿತ ವತಿಯಿಂದ ಮಹರ್ಷಿ ಶ್ರೀ ಭಗೀರಥ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪ ನಮನ ಸಲ್ಲಿಸಲಾಯಿತು.

ತಹಸೀಲ್ದಾರ್ ರವಿ ಎಸ್. ಅಂಗಡಿ ಅವರು ಮಾತನಾಡಿ, ಪ್ರಯತ್ನದ ಪರಾಕಾಷ್ಠೆಯ ಭಗೀರಥ ಪ್ರಯತ್ನವೆಂದು ಜನಜನಿತವಾಗಿದೆ. ಭಗೀರಥನು ತನ್ನ ಸಾಹಸಕ್ಕೆ ಗುರುಭಕ್ತಿಗೆ ಪ್ರಯತ್ನ ಶೀಲತೆಗೆ ತಪೋನಿಷ್ಠೆಗೆ ಆದರ್ಶವಾಗಿ ಕಂಗೊಳಿಸುತ್ತಿದ್ದಾರೆ. ಅಸಾಧ್ಯವಾದ ಕೆಲಸವನ್ನು ಛಲದಿಂದ ಸಾಧಿಸಿ ಸಫಲರಾದ ಅಂತಹ ಕಾರ್ಯ ವನ್ನು ಭಗೀರಥ ಪ್ರಯತ್ನ ಎನ್ನುತ್ತಾರೆ ಎಂದರು.

ಈ ವೇಳೆ ಉಪ್ಪಾರ ಸಮುದಾಯದ ತಾಲೂಕಾಧ್ಯಕ್ಷ ಸಂಗಪ್ಪ ಬಾವಿಕಟ್ಟಿ, ಮಂಜುನಾಥ ಕರಿಭೀಮಪ್ಪನವರ, ಪರಶುರಾಮ ಟಿ. ಅಗಸಿಮುಂದಿನ, ಶರಣಪ್ಪ ಲುಂಗಿ, ಶರಣಪ್ಪ ಮದಲಗಟ್ಟಿನವರ, ಮಾರುತಿ ಲುಂಗಿ, ಪುಂಡಲೀಕಪ್ಪ ಜೂಲಕಟ್ಟಿ, ನಾಗರಾಜ ಯರಗೇರಿ, ತಿರುಪತಿ ಅಗಸಿಮುಂದಿನ ಸೇರಿದಂತೆ ಕಂದಾಯ ಇಲಾಖೆ ಸಿಬ್ಬಂದಿ ಇದ್ದರು.

ಇದಕ್ಕೂ ಮೊದಲು ಉಪ್ಪಾರ ಸಮುದಾಯದ ಪ್ರಮುಖರು, ಯುವ ಸಮೂಹ ಪಟ್ಟಣದ ಶ್ರೀ ಭಗೀರಥ ವೃತ್ತದ ನಾಮಫಲಕಕ್ಕೆ ಪೂಜೆ ನೆರವೇರಿಸಿ ಪುಷ್ಪಾರ್ಪಣೆ ಮಾಡಿದರು.

ಇಲ್ಲಿಯ ಸರ್ಕಾರಿ ಪ್ರಥಮದರ್ಜೆ ಕಾಲೇಜು ಮಹಾ ವಿದ್ಯಾಲಯದಲ್ಲಿ ಪ್ರಾಚಾರ್ಯ ಡಾ.ಎಸ್.ವೀ. ಡಾಣಿ ಅವರು ಯೋಗಿ ಶ್ರೀ ಭಗೀರಥ ಮಹರ್ಷಿ ಅವರ ಭಾವಚಿತ್ರ ಪೂಜಿಸಿ ಕಾಲೇಜು ಉಪನ್ಯಾಸಕ ವೃಂದ ಹಾಗೂ ವಿದ್ಯಾರ್ಥಿಗಳೊಂದಿಗೆ ಪುಷ್ಪ ಸಮರ್ಪಿಸಿ ಗೌರವಿಸಿದರು.

ಅದೇರೀತಿ ಪಟ್ಟಣದ ಜೆಸ್ಕಾ ಉಪ ವಿಭಾಗದ ಕಚೇರಿ ಸೇರಿದಂತೆ ವಿವಿಧ ಸರ್ಕಾರಿ ಕಚೇರಿ, ಗ್ರಾಮ ಪಂಚಾಯಿತಿ ಕಚೇರಿ, ಶಾಲಾ-ಕಾಲೇಜುಗಳಲ್ಲಿ ಹಾಗೂ ಸಾರ್ವಜನಿಕ ಆಸ್ಪತ್ರೆ, ಪೊಲೀಸ್ ಇಲಾಖೆ, ಅಗ್ನಿಶಾಮಕ ಠಾಣೆ ಮತ್ತು ಸಂಘ-ಸಂಸ್ಥೆಗಳು ಹಾಗೂ ವಿವಿಧೆಡೆ ಹಲವು ಗಣ್ಯರು ಮಹರ್ಷಿ ಶ್ರೀ ಭಗೀರಥ ಅವರ ಭಾವಚಿತ್ರ ಪೂಜಿಸಿ ಪುಷ್ಪಾರ್ಪಣೆ ಮಾಡಿ ಗೌರವಿಸಿದರು.