ಕುಷ್ಟಗಿ | ಬಿಸಿಲ ತಾಪಕ್ಕೆ ಜನ ತತ್ತರ; ತಂಪೆರೆದ ಮಳೆ

ಸಂಗಮೇಶ ಮುಶಿಗೇರಿ

ಕೃಷಿಪ್ರಿಯ ನ್ಯೂಸ್ |

ಕುಷ್ಟಗಿ : ಬರಗಾಲದ ಜೊತೆಗೆ ಬಿಸಿಲಿನ ತಾಪಕ್ಕೆ ತತ್ತರಿಸಿ ಹೋಗಿದ್ದ ತಾಲೂಕಿನ ಜನತೆಗೆ ಮಳೆರಾಯ ತಂಪೆರೆದಿದ್ದು, ಕೃಷಿ ಚೆಟುವಟಿಕೆಯಲ್ಲಿ ತೊಡಗಿರುವ ರೈತರ ಮೊಗದಲ್ಲೂ ಮಂದಹಾಸ ಮೂಡಿಸಿದ್ದಾನೆ.

ಮಂಗಳವಾರ ರಾತ್ರಿ ಸುಮಾರು 11 ಗಂಟೆಗೆ ಬಿರುಗಾಳಿ ಗುಡುಗು, ಮಿಂಚಿನೊಂದಿಗೆ ಆರಂಭಗೊಂಡ ಮಳೆಯು ಬುಧವಾರ ಬೆಳಗಿನ ಜಾವ 5 ಗಂಟೆಯ ವರೆಗೂ ಸುರಿದಿದೆ. ಕುಷ್ಟಗಿ, ಹನುಮನಾಳ, ಹನುಮಸಾಗರ ಹೋಬಳಿ ವ್ಯಾಪ್ತಿಯಲ್ಲಿ ಉತ್ತಮ ಮಳೆಯಾದರೆ ತಾವರಗೇರಾ ಹೋಬಳಿ ವ್ಯಾಪ್ತಿಯಲ್ಲಿ ಸಾಧಾರಣ ಮಳೆ ಸುರಿದಿದೆ. ಕಳೆದ ಎರಡ್ಮೂರು ತಿಂಗಳಿನಿಂದ ಬಿರು ಬಿಸಿಲು ಮತ್ತು ಬಿಸಿ ಗಾಳಿಗೆ ಜನ ತಲ್ಲಣಿಸಿದ್ದರು. ನಿನ್ನೆ ಆರಂಭಗೊಂಡ ಮಳೆಯಿಂದ ಬಿಸಿಲಿನ ತಾಪ ಕಡಿಮೆಯಾಗಿ, ಇಂದು ತಂಪು ವಾತಾವರಣ ಸೃಷ್ಟಿಯಾಗಿದೆ.

ತಾಲೂಕಿನ ಮಳೆ ಪ್ರಮಾಣ :
ಕುಷ್ಟಗಿ – 40.0 ಮಿ.ಮೀ.
ಹನುಮಸಾಗರ – 18.1 ಮಿ.ಮೀ.
ಹನುಮನಾಳ – 20.2 ಮಿ.ಮೀ.
ದೋಟಿಹಾಳ – 30.3 ಮಿ.ಮೀ.
ಕಿಲ್ಲಾರಟ್ಟಿ – 6.2 ಮಿ.ಮೀ.
ತಾವರಗೇರಾ – 10.0 ಮಿ.ಮೀ. ಮಳೆಯಾಗಿದೆ. ಆದರೆ, ಯಾವುದೇ ಹಾನಿ ಸಂಭವಿಸಿಲ್ಲ ಎಂದು ಕಂದಾಯ ಇಲಾಖೆ ಮಾಹಿತಿ ನೀಡಿದೆ.