ಸಂಗಮೇಶ ಮುಶಿಗೇರಿ
ಕೃಷಿಪ್ರಿಯ ನ್ಯೂಸ್ |
ಕೊಪ್ಪಳ: 2023-24ನೇ ಸಾಲಿನಲ್ಲಿ ಜಿಲ್ಲೆಯ ಕುಷ್ಟಗಿ ತಾಲೂಕನ್ನು ಸರ್ಕಾರ ತೀವ್ರ ಬರ ಪೀಡಿತ ಪ್ರದೇಶವೆಂದು ಘೋಷಿಸಿ ರೈತರ ಖಾತೆಗೆ ಬರ ಪರಿಹಾರ ವಿತರಣೆಗೆ ಮುಂದಾಗಿದೆ.
ಕಳೆದ ವರ್ಷ ಮುಂಗಾರು ಕೈಕೊಟ್ಟ ಪರಿಣಾಮ ಬೆಳೆ ಹಾನಿ ಸಂಭವಿಸಿತ್ತು. ಸರ್ಕಾರ ಮೊಬೈಲಿನಲ್ಲಿ ಬೆಳೆ ಸಮೀಕ್ಷೆ ಯ್ಯಾಪ್ ಮೂಲಕ ರೈತರು ಸ್ವತಃ ತಮ್ಮ ಜಮೀನಿನಲ್ಲಿ ತಾವು ಬೆಳೆದ ಬೆಳೆಗಳ ವಿವರವನ್ನು ದಾಖಲಿಸಲು ಅವಕಾಶ ಕಲ್ಪಿಸಿತ್ತು. ಅದರಂತೆ ರೈತರು ಮೊಬೈಲ್ ತಂತ್ರಾಂಶದಲ್ಲಿ ತಮ್ಮ ಜಮೀನಿನ ಬೆಳೆಗಳ ವಿವರವನ್ನು ಸ್ವತಃ ತಾವೇ ದಾಖಲಿಸಿದ್ದರು. ಆದರೆ ಕೆಲವರು ಮೊಬೈಲ್ ತಂತ್ರಾಶ ಬಳಕೆ ಮಾಹಿತಿ ಇಲ್ಲದೇ ಹಾಗೆಬಿಟ್ಟಿದ್ದರು. ಇದರ ಪರಿಣಾಮ ತಾಲೂಕಾಡಳಿತ ಆಯಾ ಇಲಾಖೆ ಮೇಲ್ವಿಚಾರಕರನ್ನು ಮತ್ತು ಆಯಾ ಗ್ರಾಮ ಲೆಕ್ಕಾಧಿಕಾರಿ ಮತ್ತು ಪಿಆರ್’ಒ ಮೂಲಕ ಜಮೀನುಗಳ ಜಿಪಿಎಸ್ ಮಾಡುವ ಮೂಲಕ ಬೆಳೆ ಸರ್ವೆ ಕಾರ್ಯ ನಡೆಸಿತ್ತು. ಜೊತೆಗೆ ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ ಮತ್ತು ಕಂದಾಯ ಇಲಾಖೆ ರೈತರು ಬೆಳೆ ಹಾನಿ ಪರಿಹಾರ ಪಡೆಯಲು ಅಗತ್ಯ ದಾಖಲೆಗಳನ್ನು ಪಡೆದು ಎಫ್’ಐ.ಡಿ. ಫೃಟ್ ತಂತ್ರಾಂಶದಲ್ಲಿ ನೋಂದಣಿ ಕಾರ್ಯ ಪೂರ್ಣಗೊಳಿಸಿತ್ತು. ಬಳಿಕ ರಾಜ್ಯ ಸರ್ಕಾರ ರೈತರ ಬ್ಯಾಂಕ್ ಖಾತೆಗಳಿಗೆ ಬೆಳೆ ಹಾನಿ ಪರಿಹಾರ ಹಾಕಲಾರಂಭಿಸಿತು. ಆದರೆ, ಬಹುತೇಕ ರೈತರಿಂದ ಆಧಾರ ಸೀಡಿಂಗ್, ಎನ್.ಪಿ.ಸಿ. ಆಗದೇ ಇರುವುದರಿಂದ ಖಾತೆಗಳಿಗೆ ಬರ ಪರಿಹಾರ ಹಣ ಜಮೆಯಾಗುತ್ತಿಲ್ಲವೆಂದು ಅರಿತು ತಾಲೂಕಾಡಳಿತ ಹೋಬಳಿ ವಾರು ಸಹಾಯವಾಣಿ ಕೇಂದ್ರ ಸ್ಥಾಪಿಸಿದೆ. ರೈತರು ಕರೆ ಮಾಡಿ ನ್ಯೂನತೆಗಳನ್ನು ಸರಿಪಡಿಸಿಕೊಂಡು ಬರ ಪರಿಹಾರ ಪಡೆದುಕೊಳ್ಳಲು ಕೋರಿದೆ.
ಆದರೆ, ಆಧಾರ ಸೀಡಿಂಗ್, ಎನ್.ಪಿ.ಸಿ. ಆಗಿದ್ದರೂ ತಮ್ಮ ಬ್ಯಾಂಕ್ ಖಾತೆಗಳಿಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಬರ ಪರಿಹಾರ ಜಮೆ ಆಗಿಲ್ಲವೆಂದು ರೈತರು ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ ಮತ್ತು ಕಂದಾಯ ಇಲಾಖೆಗಳಿಗೆ ಅಲೆದಾಡುತ್ತಿದ್ದಾರೆ. ಕಾರಣ ಕೇಳಿದಾಗ ಬೆಳೆ ದರ್ಶಕ ಆಪ್’ದಲ್ಲಿ ಬೆಳೆ ಕಟಾವು, ಪಾಳು ಭೂಮಿ ಎಂದು ತೋರಿಸುತ್ತಿರುವುದರಿಂದ ಬ್ಯಾಂಕ್ ಖಾತೆಗೆ ಬರ ಪರಿಹಾರ ಜಮೆಯಾಗುತ್ತಿಲ್ಲ ಎಂದು ಅಧಿಕಾರಿಗಳು ತಿಳಿಸುತ್ತಿದ್ದಾರೆ ಎಂದು ರೈತರು ಅಳಲು ತೋಡಿಕೊಳ್ಳುತ್ತಿದ್ದಾರೆ.
ಇಲಾಖೆಯಿಂದ ಬೆಳೆ ಸರ್ವೆ ಜಿಪಿಎಸ್ ಮಾಡುವ ಕಾರ್ಯ ತಡವಾಗಿದ್ದರ ಹಿನ್ನೆಲೆ ರೈತರು ಅದಾಗಲೇ ಬೆಳೆ ಕಟಾವು ಮಾಡಿದ್ದರು. ಹಾಗಾಗಿ ಶೇ.35ರಷ್ಟು ರೈತರ ಖಾತೆಗಳಿಗೆ ಬರ ಪರಿಹಾರ ಜಮೆಯಾಗಿಲ್ಲ. ಈ ಕುರಿತು ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗಿದೆ ಎಂದು ಕಂದಾಯ ಅಧಿಕಾರಿಗಳು ಮಾಹಿತಿ ನೀಡಿದರು
ಬರ ಪರಿಹಾರ ಹಣ ಈಗಾಗಲೇ ಹಂತ ಹಂತವಾಗಿ ರೈತರ ಬ್ಯಾಂಕ್ ಖಾತೆಗಳಿಗೆ ಜಮೆಯಾಗುತ್ತಿದೆ. ಆದರೆ, ಆಧಾರ ಸೀಡಿಂಗ್, ಎನ್.ಪಿ.ಸಿ. ಆಗದೇ ಕೆಲ ರೈತರ ಖಾತೆಗೆ ಹಣ ಜಮೆಯಾಗುತ್ತಿಲ್ಲ. ಈ ನ್ಯೂನತೆಗಳನ್ನು ಸರಿಪಡಿಸಿಕೊಳ್ಳಲು ತಾಲೂಕಾಡಳಿತ ಹೋಬಳಿವಾರು ಸಹಾಯವಾಣಿ ಕೇಂದ್ರ ತೆರೆದಿದೆ. ಆದರೆ, ಜಿಪಿಎಸ್ ಮೂಲಕ ಸರ್ವೆ ಮಾಡಿದ ಸಂದರ್ಭದಲ್ಲಿ ಜಮೀನು ಬೆಳೆ ಕಟಾವು ಆಥವಾ ಪಾಳು ಭೂಮಿ ಹೊಂದಿದ್ದರೆ ಬರ ಪರಿಹಾರ ಬರುವುದಿಲ್ಲ. ಇಂತಹ ಜಮೀನುಗಳಿಗೂ ಪರಿಹಾರ ಒದಗಿಸುವ ಕುರಿತು ಜಿಲ್ಲಾಧಿಕಾರಿಗಳ ಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ.
– ಅಜ್ಮೀರ ಅಲಿ
ಸಹಾಯಕ ಕೃಷಿ ಅಧಿಕಾರಿ, ಕುಷ್ಟಗಿ.