ಸಂಗಮೇಶ ಮುಶಿಗೇರಿ
ಕೃಷಿಪ್ರಿಯ ನ್ಯೂಸ್ |
ಕುಷ್ಟಗಿ : ಪ್ರಸ್ತುತ ಮುಂಗಾರು ಹಂಗಾಮಿನಲ್ಲಿ ಉತ್ತಮ ಮಳೆಯಾಗುತಿದ್ದು, ಎರಡ್ಮೂರು ದಿನಗಳ ಬಳಿಕ ರೈತ ಸಂಪರ್ಕ ಕೇಂದ್ರದಲ್ಲಿ ಬೀಜ ವಿತರಣೆ ಆರಂಭಿಸಲಾಗುತ್ತದೆ. ತಾಲೂಕಿನ ರೈತ ಬಾಂಧವರು ಭೂಮಿಯ ತೇವಾಂಶ ನೋಡಿಕೊಂಡು ಬಿತ್ತನೆಗೆ ಮುಂದಾಗಬೇಕು ಎಂದು ಸಹಾಯಕ ಕೃಷಿ ಅಧಿಕಾರಿ ಅಜ್ಮೀರ ಅಲಿ ಅವರು ಹೇಳಿದ್ದಾರೆ.
ಈ ಕುರಿತು ಪಟ್ಟಣದ ತಮ್ಮ ಕಾರ್ಯಾಲಯದಲ್ಲಿ ಗುರುವಾರ ಮಾಧ್ಯಮ ಮುಖಾಂತರ ತಿಳಿಸಿದ್ದಾರೆ. ಸಧ್ಯ ಸುರಿದಿರುವ ಮಳೆಯಿಂದಾಗಿ ಭೂಮಿ ತೇವಾಂಶ ಹೊಂದಿದ್ದರೆ ಮಾತ್ರ ಬಿತ್ತನೆಗೆ ಮುಂದಾಗಬೇಕು. ತೇವಾಂಶ ಕೊರತೆಯಿದ್ದಲ್ಲಿ ಇನ್ನೆರಡು ಮಳೆಯಾದ ಬಳಿಕ ಬಿತ್ತನೆ ಮಾಡುವುದು ಸೂಕ್ತ. ಸಧ್ಯ ತಾಲೂಕಿನ ಎಲ್ಲಾ ರೈತ ಸಂಪರ್ಕ ಕೇಂದ್ರಗಳಲ್ಲಿ ಈಗಾಗಲೇ ಹೆಸರು ಮತ್ತು ತೊಗರೆ ಬೀಜಗಳ ದಾಸ್ತಾನು ಮಾಡಿಕೊಳ್ಳಲಾಗಿದೆ. ಎರಡ್ಮೂರು ದಿನಗಳ ಬಳಿಕ ರೈತರಿಗೆ ವಿತರಿಸಲು ಪ್ರಾರಂಭಿಸಲಾಗುತ್ತದೆ ಎಂದು ತಿಳಿಸಿರುವ ಕೃಷಿ ಅಧಿಕಾರಿ ಅಜ್ಮೀರ ಅವರು, ಬಿತ್ತನೆ ಸಮಯದಲ್ಲಿ ಮುಖ್ಯವಾಗಿ ಉತ್ತಮ ಬೀಜಗಳನ್ನು ಆಯ್ಕೆ ಮಾಡಿಕೊಂಡು ಬಿತ್ತನೆ ಮಾಡಬೇಕು. ಬಿತ್ತುವ ಪೂರ್ವದಲ್ಲಿ ಬೀಜೋಪಚಾರ ಮಾಡಿ ಬಿತ್ತನೆ ಮಾಡಿದರೆ ಬಹಳ ಉತ್ತಮ. ಮುಂದೆ ಬರುವ ರೋಗ ಮತ್ತು ಕೀಟಗಳನ್ನು ಮೊದಲನೆ ಹಂತದಲ್ಲಿ ತಡೆಯಬಹುದಾಗಿದೆ ಎಂದು ಸಲಹೆ ನೀಡಿದ್ದಾರೆ.
ಪೈಪು, ತಾಡಪತ್ರಿ ಲಭ್ಯ : ರೈತ ಸಂಪರ್ಕ ಕೇಂದ್ರದಲ್ಲಿ ಕೃಷಿ ಇಲಾಖೆಯ ಸಹಾಯಧನದಲ್ಲಿ ನೀರು ಪೂರೈಸುವ ಪಿವಿಸಿ ಪೈಪುಗಳು ಹಾಗೂ ತಾಡಪತ್ರಿಗಳು ಲಭ್ಯವಿದ್ದು, ಆಸಕ್ತ ರೈತರು ಅವಶ್ಯಕತೆ ಇದ್ದಲ್ಲಿ ತೆಗೆದುಕೊಂಡು ಹೋಗಬಹುದು ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಅಜ್ಮೀರ ಅಲಿ ಅವರು ತಿಳಿಸಿದ್ದಾರೆ.