ಸಂಗಮೇಶ ಮುಶಿಗೇರಿ
ಕೃಷಿಪ್ರಿಯ ನ್ಯೂಸ್ |
ಕುಷ್ಟಗಿ : ಬಿರುಗಾಳಿ, ಮಳೆಯಿಂದಾಗಿ ತಾಲೂಕಿನ ಹಿರೇಗೊಣ್ಣಾಗರ ಸೀಮಾದ ಪಪ್ಪಾಯಿ ತೋಟಗಳು ಹಾಳಾಗಿದ್ದು, ಲಕ್ಷಾಂತರ ರೂಪಾಯಿ ಹಾನಿ ಸಂಭವಿಸಿದೆ.
ಗುರುವಾರ ಸಂಜೆ ನಾಲ್ಕು ಗಂಟೆ ಸುಮಾರಿಗೆ ಸುರಿದ ಗುಡುಗು, ಸಿಡಿಲು, ಮಿಂಚು ಮಿಶ್ರಿತ ಮಳೆ, ಗಾಳಿಯಿಂದಾಗಿ ಗ್ರಾಮದ ರೈತ ಶಿವಶರಣಪ್ಪ ಮೆಣಸಿಗೇರಿ ಎಂಬುವರಿಗೆ ಸೇರಿದ ತೋಟದಲ್ಲಿ ಸುಮಾರು 1000 ಗಿಡಗಳು ನೆಲಕಚ್ಚಿವೆ.
ರೈತ ಸಿದ್ದಪ್ಪ ವ್ಯಾಪಾರಿ ಎಂಬುವರಿಗೆ ಸೇರಿದ ತೋಟದಲ್ಲಿ ಸುಮಾರು 600 ಗಿಡಗಳು, ರಂಗಪ್ಪ ಮೆಣಸಿಗೇರಿ ಎಂಬ ರೈತನಿಗೆ ಸೇರಿದ ತೋಟದಲ್ಲಿ ಅಂದಾಜು 500ಕ್ಕೂ ಹೆಚ್ಚು ಗಿಡಗಳು ಹಾಳಾಗಿವೆ. ಈ ಮೂರು ತೋಟಗಳಲ್ಲಿ ಸುಮಾರು 2100 ಪಪ್ಪಾಯಿ ಗಿಡಗಳು ನಾಶವಾಗಿದ್ದು, ಗಿಡಗಳಲ್ಲಿನ ಎಲ್ಲ ಎಲೆಗಳು ಹರಿದು, ಕಾಯಿಗಳು ನೆಲಕ್ಕೆ ಬಿದ್ದ ಪರಿಣಾಮ ರೈತರು ತಲೆ ಮೇಲೆ ಕೈಹೊತ್ತು ಕುಳಿತಿದ್ದಾರೆ.
ಮಳೆ, ಗಾಳಿಯಿಂದಾಗಿ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದ್ದು, ಲಕ್ಷಾಂತರ ರೂಪಾಯಿ ಬೆಲೆಬಾಳುವ ಪಪ್ಪಾಯಿ ಬೆಳೆಗಳನ್ನು ಕಳೆದುಕೊಂಡು ರೈತರು ಕಂಗಾಲಾಗಿದ್ದಾರೆ. ಸಂಬಂಧಿಸಿದ ತೋಟಗಾರಿಕಾ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿನೀಡಿ ಸಂಕಷ್ಟಕ್ಕೆ ಸಿಲುಕಿರುವ ರೈತರಿಗೆ ಸರ್ಕಾರದಿಂದ ಪರಿಹಾರ ಕಲ್ಪಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಮಳೆ ಪ್ರಮಾಣ ವರದಿ ಹೀಗಿದೆ :
ಕುಷ್ಟಗಿ -15.0 ಮಿ.ಮೀ.
ಹನುಮಸಾಗರ – 10.1 ಮಿ.ಮೀ.
ಹನುಮನಾಳ – 15.6 ಮಿ.ಮೀ.
ದೋಟಿಹಾಳ – 0
ಕಿಲ್ಲಾರಟ್ಟಿ – 2.8 ಮಿ.ಮೀ.
ತಾವರಗೇರಾ – 0 ಮಳೆಯಾಗಿದೆ ಎಂದು ಕಂದಾಯ ಇಲಾಖೆ ತಿಳಿಸಿದೆ.