ಹನುಮಸಾಗರ | ಮಳೆ, ಗಾಳಿಗೆ ಬೆಳೆ ಹಾನಿ, ಅಧಿಕಾರಿಗಳು ಭೇಟಿ

ಸಂಗಮೇಶ ಮುಶಿಗೇರಿ

ಕೃಷಿಪ್ರಿಯ ನ್ಯೂಸ್ |

ಕುಷ್ಟಗಿ : ತಾಲೂಕಿನ ಹನುಮಸಾಗರ ಹೋಬಳಿಯಲ್ಲಿ ಗುರುವಾರ ಸಂಜೆ ಅಕಾಲಿಕವಾಗಿ ಸುರಿದ ಮಳೆ, ಗಾಳಿಯಿಂದಾಗಿ ತೋಟಗಾರಿಕೆ ಮತ್ತು ಹೊರಬೆಳೆ ಸಂಪೂರ್ಣವಾಗಿ ಹಾನಿಯಾಗಿದೆ.

ತುಗ್ಗಲಡೋಣಿ ಗ್ರಾಮದ ಶಿವಪುತ್ರಪ್ಪ ಕುಣಿಮಿಂಚಿ ಎಂಬುವರಿಗೆ ಸೇರಿದ ಒಂದುವರೆ ಎಕರೆ ಜಮೀನಿನಲ್ಲಿ ಬೆಳೆಯಲಾಗಿದ್ದ ಕಟಾವಿನ ಹಂತದ ಪಪ್ಪಾಯಿ ಬೆಳೆ ಹಾಗೂ ಮಡಿಕೇರಿ ಸೀಮಾದಲ್ಲಿ ಎಲೆ ತೋಟ, ನುಗ್ಗೆ ಗಿಡಗಳು ಸಂಪೂರ್ಣವಾಗಿ ನೆಲಕಚ್ಚಿದ್ದು, ರೈತರಿಗೆ ನುಂಗಲಾರದ ತುತ್ತಾಗಿದೆ. ಅದೇರೀತಿ ಸುತ್ತಮುತ್ತಲಿನ ಅನೇಕ ತೋಟಗಾರಿಕೆ ಮತ್ತು ಹೊರ ಬೆಳೆಗಳು ಅಕಾಲಿಕ ಮಳೆ ಬಿರುಗಾಳಿಗೆ ಹಾನಿಗೊಳಗಾಗಿವೆ.

ಇಂದು ಶುಕ್ರವಾರ ಬೆಳೆಹಾನಿ ಸ್ಥಳಕ್ಕೆ ಕಂದಾಯ ಇಲಾಖೆ ಆರ್.ಐ. ಉಮೇಶಗೌಡ ಪಾಟೀಲ್, ಗ್ರಾಮ ಲೆಕ್ಕಾಧಿಕಾರಿ ಸಂಗಮೇಶ ಸೇರಿದಂತೆ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಬೆಳೆ ಹಾನಿ ಪರಿಶೀಲಿಸಿದ್ದಾರೆ. ಅಕಾಲಿಕ ಮಳೆ ಗಾಳಿಯಿಂದಾಗಿ ತೋಟಗಾರಿಕೆ ಮತ್ತು ಹೊರ ಬೆಳೆಗಳು ಹಾನಿಯಾಗಿರುವ ಕುರಿತು ಸರ್ಕಾರಕ್ಕೆ ವರದಿ ಕಳುಹಿಸಿ ಪರಿಹಾರ ಕಲ್ಪಿಸುವುದಾಗಿ ತಿಳಿಸಿದ್ದಾರೆ.

ಅಧಿಕಾರಿಗಳು ಭೇಟಿ ನೀಡಿಲ್ಲ : ಗುರುವಾರ ಸಂಜೆ ಅಕಾಲಿಕ ಮಳೆ, ಗಾಳಿಗೆ ಹನುಮನಾಳ ಹೋಬಳಿಯಲ್ಲಿನ ತೋಟಗಾರಿಕೆ ಮತ್ತು ಹೊರ ಬೆಳೆಗಳು ಹಾನಿಗೊಳಗಾಗಿವೆ. ಈ ಕುರಿತು ಅಧಿಕಾರಿಗಳಿಗೆ ಫೋನ್ ಕರೆ ಮಾಡಿ ತಿಳಿಸಲಾಗಿದೆ. ಆದರೆ, ಅಧಿಕಾರಿಗಳು ಶುಕ್ರವಾರ ಸಂಜೆಯಾದರೂ ಸಹ ಬೆಳೆಹಾನಿಯಾದ ಜಮೀನುಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿಲ್ಲ ಎಂದು ರೈತರು ದೂರು ವ್ಯಕ್ತಪಡಿಸಿದ್ದಾರೆ.