ಕುಷ್ಟಗಿ | ರೋಹಿಣಿ ಮಳೆ ತಂದ ರೈತನ ಮೊಗದಲಿ ಕಳೆ

ಸಂಗಮೇಶ ಮುಶಿಗೇರಿ

ಕೃಷಿಪ್ರಿಯ ನ್ಯೂಸ್ |

ಕುಷ್ಟಗಿ : ‘ರೋಹಿಣಿ ಮಳೆ ಬಂದರೆ ಓಣಿಯಲ್ಲ ಕೆಸರು, ಓಣಿ ತುಂಬಾ ಜೋಳ’ ಎಂಬ ನಾಣ್ಣುಡಿಯಂತೆ ಕಳೆದೆರಡು ದಿನಗಳಿಂದ ತಾಲೂಕಿನಲ್ಲಿ ಆರಂಭಗೊಂಡ ರೋಹಿಣಿ ಮಳೆ ಅಕ್ಷರ ಸಹ ಸತ್ಯವಾಗಿದೆ.

ತಾಲೂಕಿನೆಲ್ಲಡೆ ಉತ್ತಮ ಮಳೆಯಾಗಿರುವ ಕುರಿತು ವರದಿ ತಾಲೂಕಾಡಳಿತ ನೀಡಿದೆ. ಭಾನುವಾರ ರಾತ್ರಿ ಗುಡುಗು, ಮಿಂಚು, ಗಾಳಿ ಮಿಶ್ರಿತ ಆರಂಭಗೊಂಡ ಮಳೆ ಕುಷ್ಟಗಿ, ತಾವರಗೇರಾ ಹೋಬಳಿಯಲ್ಲಿ ಹೆಚ್ಚು ಸುರಿದಿದೆ. ಹನುಮಸಾಗರ, ಹನುಮನಾಳ ಹೋಬಳಿಯಲ್ಲಿ ಮಳೆ ಸಾಧಾರಣವಾಗಿದೆ. ಬರುವ ತಿಂಗಳು ಜೂನ್ 7ರ ವರೆಗೆ ಉತ್ತಮ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳುತ್ತಿದೆ. ಸೂಕ್ತ ಬೆಳೆಗಳಾದ ಹೆಸರು, ಉದ್ದು, ಕೂರಿಗೆ ಭತ್ತ, ಹತ್ತಿ, ತೊಗರಿ, ಮುಸುಕಿನ ಜೋಳ ಮತ್ತು ಹಸಿರೆಲೆ ಗೊಬ್ಬರ ಬೆಳೆಯಬಹುದಾಗಿದೆ.

ರೈತರಿಗೆ ಕೃಷಿ ಅಧಿಕಾರಿ ಸಲಹೆ : ತಾಲೂಕಿನಲ್ಲಿ ಮುಂಗಾರು ಬಿತ್ತನೆಗೆ ಉತ್ತಮ ಮಳೆಯಾಗಿದೆ. ಬಿತ್ತನೆಗೆ ಮೊದಲು ಎಲ್ಲಾ ರೈತರು ಬೀಜೋಪಚಾರ ಮಾಡಿಕೊಂಡು ಬಿತ್ತುವುದು ಸೂಕ್ತ ಎಂದು ಹೇಳಿರುವ ಸಹಾಯಕ ಕೃಷಿ ಅಧಿಕಾರಿ ಅಜ್ಮೀರ ಅಲಿ ಅವರು, ಪರವಾನಗಿ ಹೊಂದಿರುವ ರಸಗೊಬ್ಬರ ಅಂಗಡಿಗಳಲ್ಲಿ ಮಾತ್ರ ಬೀಜಗಳನ್ನು ಖರೀದಿಸಬೇಕು. ತಾಲೂಕಿನಲ್ಲಿ ಒಟ್ಟು ಏಳು ಬೀಜ ವಿತರಣೆ ಕೇಂದ್ರಗಳಿದ್ದು, ರೈತ ಸಂಪರ್ಕ ಕೇಂದ್ರಗಳು ಸೇರಿ ಹೊಸತಾಗಿ ಹೆಚ್ಚುವರಿ ಬೀಜ ವಿತರಣೆ ಕೇಂದ್ರ ತೆರೆಯಲಾಗಿದೆ. ಲಬ್ಯವಿರುವ ಹೆಸರು, ತೊಗರಿ, ಮೆಕ್ಕೆಜೋಳ, ಸಜ್ಜೆ, ಸೂರ್ಯಕಾಂತಿ ಬೀಜಗಳನ್ನು ವಿತರಿಸಲಾಗುತ್ತಿದೆ. ರೈತರು ಸದೂಪಯೋಗ ಪಡಿಸಿಕೊಳ್ಳಲು ತಿಳಿಸಿದ್ದಾರೆ.

ಡಿಎಪಿ ಗೊಬ್ಬರ ಸಿಗದಿದ್ದರೆ ಅದರ ಬದಲಾಗಿ ಸಂಯುಕ್ತ ರಸಗೊಬ್ಬರಗಳಾದ ಕಾಂಪ್ಲೆಕ್ಸ್ 20:20, 013 , 10:20 ಗೊಬ್ಬರಗಳು ಕೂಡಾ ಬಿತ್ತನೆಗೆ ಸೂಕ್ತವಾಗಿವೆ. ಬೀಜ ಮೊಳಕೆಯಿಂದ ಬೆಳೆಯುವವರೆಗೂ ಬೇಕಾಗುವ ಅಗತ್ಯ ಸಾರಜನಕ, ರಂಜಕ ಮತ್ತು ಪೊಟ್ಯಾಶಿಯಂ ಈ ಮೂರು ಪೋಷಕಾಂಶಗಳುಳ್ಳ ಸಂಯುಕ್ತ ರಸಗೊಬ್ಬರ ಬಳಕೆ ಮಾಡಿಕೊಂಡು ರೈತರು ಬಿತ್ತನೆ ಮಾಡಬಹುದು, ಇಳುವರಿಗೆ ಯಾವುದೇ ರೀತಿಯ ತೊಂದರೆಯಿಲ್ಲ ಎಂದು ಸಹಾಯಕ ಕೃಷಿ ಅಧಿಕಾರಿ ಅಜ್ಮೀರ ಅಲಿ ಸಲಹೆ ನೀಡಿದ್ದಾರೆ.

ಭಾನುವಾರ ಸುರಿದ ಮಳೆ ಪ್ರಮಾಣ ವರದಿ ಹೀಗಿದೆ :
ಕುಷ್ಟಗಿ – 29.0 ಮಿ.ಮೀ.
ಹನುಮಸಾಗರ – 8.2 ಮಿ.ಮೀ.
ಹನುಮನಾಳ – 11.8 ಮಿ.ಮೀ.
ದೋಟಿಹಾಳ – 26.0 ಮಿ.ಮೀ.
ಕಿಲ್ಲಾರಟ್ಟಿ – 28.2 ಮಿ.ಮೀ.
ತಾವರಗೇರಾ – 43.6 ಮಿ.ಮೀ. ಮಳೆಯಾಗಿರುವುದಾಗಿ ಕಂದಾಯ ಇಲಾಖೆ ವರದಿ ನೀಡಿದೆ.