ಸಂಗಮೇಶ ಮುಶಿಗೇರಿ
ಕೃಷಿಪ್ರಿಯ ನ್ಯೂಸ್ |
ಕುಷ್ಟಗಿ : ಡಿ.ಎ.ಪಿ, ರಸಗೊಬ್ಬರಕ್ಕೆ ಪರ್ಯಾಯವಾಗಿ ಸಂಯುಕ್ತ ರಸಗೊಬ್ಬರಗಳನ್ನು ಬಳಸಿ ಎಂದು ರೈತರಿಗೆ ಸಹಾಯಕ ಕೃಷಿ ನಿರ್ದೇಶಕ ಅಜ್ಮೀರ ಅಲಿ ಅವರು ತಿಳಿಸಿದ್ದಾರೆ.
ಈ ಕುರಿತು ಸೋಮವಾರ ಮಾಧ್ಯಮ ಮೂಲಕ ಹೊರಡಿಸಿರುವ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಪ್ರಸಕ್ತ ವರ್ಷ ಮುಂಗಾರು ಉತ್ತಮ ಆಗುತ್ತಿರುವುದರಿಂದ ತಾಲೂಕಿನಲ್ಲಿ ಒಟ್ಟು 1.24 ಲಕ್ಷ ಹೆಕ್ಟರ್ ಕೃಷಿ ಭೂಮಿ ಇದ್ದು, ಮುಂಗಾರು ಹಂಗಾಮಿಗೆ 79 ಸಾವಿರ ಹೆಕ್ಟರ್ ಬಿತ್ತನೆ ಸಾಧ್ಯತೆ ಇರುವುದರಿಂದ ಡಿ.ಎ.ಪಿ ರಸಗೊಬ್ಬರ ಹೆಚ್ಚಿನ ಬೇಡಿಕೆ ಇದೆ. ಇದಕ್ಕೆ ಪರ್ಯಾಯವಾಗಿ ಮಾರುಕಟ್ಟೆಯಲ್ಲಿ ಲಭ್ಯವಿರುವ ವಿವಿಧ ದರ್ಜೆಯ ರಸಗೊಬ್ಬರಗಳನ್ನು ಸಂಯೋಜಿಸಿ ಬಳಕೆ ಮಾಡಬಹುದಾಗಿದೆ.
ರೈತರು ಕೇವಲ ಒಂದು ಅಥವಾ ಎರಡು ಪೋಷಕಾಂಶ ಒದಗಿಸುವ ಯೂರಿಯ ಹಾಗೂ ಡಿ.ಎ.ಪಿ.ಯನ್ನು ರೂಢಿಗತವಾಗಿ ಬಳಸುತ್ತಿದ್ದು, ಇವುಗಳಲ್ಲಿ ಸಾರಜನಕ ಮತ್ತು ರಂಜಕದ ಅಂಶ ಮಾತ್ರವಿರುತ್ತದೆ. ಆದರೆ, ಬೆಳೆಗಳಿಗೆ ಬರ ಮತ್ತು ರೋಗ ನಿರೋಧಕ ಶಕ್ತಿ ನೀಡಿ ಕಾಳಿನ ತೂಕ ಹೆಚ್ಚಿಸಲು ಅತ್ಯಂತ ಅವಶ್ಯಕವಾಗಿರುವ ಪೊಟ್ಯಾಸ್ ಲಭ್ಯವಿರುವುದಿಲ್ಲ. ಮಾರುಕಟ್ಟೆಯಲ್ಲಿ ವಿವಿಧ ಶ್ರೇಣಿಯ (ಗ್ರೇಡ್) ಸಾರಜನಕ, ರಂಜಕ ಮತ್ತು ಪೊಟ್ಯಾಷ್‌ಯುಕ್ತ ಬಹಳಷ್ಟು ರಸಗೊಬ್ಬರಗಳು ಲಭ್ಯವಿದ್ದು, ಶಿಫಾರಸ್ಸಿನಂತೆ ವಿವಿಧ ರಸಗೊಬ್ಬರಗಳ ಸಂಯೋಜನೆಯೊಂದಿಗೆ ಬಳಸಬಹುದಾಗಿದೆ.
ಶಿಫಾರಸ್ಸಿನಂತೆ ಬೆಳೆಗಳಿಗೆ ಸಾರಜನಕ : ರಂಜಕ : ಪೋಟಾಷ್ ರಸಗೊಬ್ಬರಗಳನ್ನು 4:2:1 ರ ಅನುಪಾತದಲ್ಲಿ ಬಳಸಬೇಕಾಗಿರುತ್ತದೆ. ಆದರೆ, ಇತ್ತೀಚಿನ ವರ್ಷಗಳಲ್ಲಿ ರೈತರು ಬಳಸುತ್ತಿರುವ ರಸಗೊಬ್ಬರಗಳ ಅನುಪಾತವು ರಾಜ್ಯದಲ್ಲಿ 5:3:1 ಆಗಿರುತ್ತದೆ. ಇದನ್ನು ಸಮತೋಲನಾತ್ಮಕ ರಸಗೊಬ್ಬರಗಳ ಬಳಕೆಯನ್ನು ಉತ್ತೇಜಿಸಲು ಪೊಟ್ಯಾಷ್‌ಯುಕ್ತ ಸಂಯುಕ್ತ ರಸಗೊಬ್ಬರಗಳ ಬಳಕೆಯನ್ನು ಪ್ರೇರೇಪಿಸುವುದು ಮುಖ್ಯವಾಗಿರುತ್ತದೆ. ಅಲ್ಲದೆ ರೈತರು ರಸಗೊಬ್ಬರವನ್ನು ಕೇವಲ ಒಂದೇ ಸಂಸ್ಥೆಯ ಅಥವಾ ಒಂದೇ ರಸಗೊಬ್ಬರಕ್ಕೆ ಆದ್ಯತೆ ನೀಡದೆ ಡಿ.ಎ.ಪಿ ರಸಗೊಬ್ಬರಕ್ಕೆ ಪರ್ಯಾಯವಾಗಿ ಗಂಧಕ ಒದಗಿಸುವ 20:20:0:13 ಹಾಗೂ ಪೊಟ್ಯಾಷ್ ಒದಗಿಸುವ ಇತರೆ ಸಂಯುಕ್ತ ರಸಗೊಬ್ಬರಗಳಾದ 15:15:15, 10:26:26, 12:32:16, 22:22:11, 17:17:17, 14:28:14, 19:19:19, 20:10:10 ಇತ್ಯಾದಿ ರಸಗೊಬ್ಬರಗಳನ್ನು ಸಹ ಬಳಸಬಹುದಾಗಿದೆ ಎಂದು ಈ ಮೂಲಕ ಸಹಾಯಕ ಕೃಷಿ ನಿರ್ದೇಶಕ ಅಜ್ಮೀರ ಅಲಿ ಅವರು ರೈತರಿಗೆ ಸಲಹೆ ನೀಡಿದ್ದಾರೆ.