ಕುಷ್ಟಗಿ | APK ಅಪ್ಲಿಕೇಶನ್ ಡೌನಲೋಡ್ ಮಾಡಿದ್ದ ವ್ಯಕ್ತಿಯ ಬ್ಯಾಂಕ್ ಖಾತೆಗೆ ಕನ್ನ!

ಸಂಗಮೇಶ ಮುಶಿಗೇರಿ

ಕೃಷಿಪ್ರಿಯ ನ್ಯೂಸ್ |

ಕೊಪ್ಪಳ: ಇತ್ತೀಚೆಗೆ ಆನ್ಲೈನ್ ಮೂಲಕ ಬ್ಯಾಂಕ್ ಖಾತೆಯ ಹಣ ದೋಚುವ ಖದೀಮರ ಉಪಟಳ ಜಾಸ್ತಿಯಾಗಿದ್ದು, ಎಚ್ಚರದಿಂದಿರಲು ದಿನನಿತ್ಯ ಸಾಕಷ್ಟು ಸಂದೇಶಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಆದಾಗ್ಯೂ ಮೈಮರೆತ ಕಾರಣಕ್ಕೆ ಕುಷ್ಟಗಿ ನಿವಾಸಿಯೊಬ್ಬರು ತಮ್ಮ ಬ್ಯಾಂಕ್ ಖಾತೆಯಿಂದ ಹಣ ಕಳೆದುಕೊಂಡ ವಿಷಯ ತಡವಾಗಿ ಬೆಳಕಿಗೆ ಬಂದಿದೆ.

ಘಟನೆ ಜಿಲ್ಲೆಯ ಕುಷ್ಟಗಿ ಪಟ್ಟಣದಲ್ಲಿ ಸೋಮವಾರ ನಡೆದಿದೆ.
ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಪಕ್ಕದ ಶ್ರೀ ಜಗದ್ಗುರು ರೇವಣಸಿದ್ದೇಶ್ವರ ಆಗ್ರೋ ಕೇಂದ್ರದ ಮಾಲಿಕ ಸಿದ್ದಯ್ಯ ಗುರುವಿನ ಎಂಬುವರ ಮೊಬೈಲ್ ವಾಟ್ಸಾಪ್’ಗೆ APK ಅಪ್ಲಿಕೇಶನ್ ಸಂದೇಶ ಬಂದಿದೆ. ಡೌನ್ಲೋಡ್ ಮಾಡಿದ ತಕ್ಷಣವೇ ಇವರ IDFC ಬ್ಯಾಂಕ್ ಖಾತೆಯಿಂದ ಸೈಬರ್ ಖದೀಮರು ₹10,000 ಕಳ್ಳತನ ಮಾಡಿದ್ದಾರೆ.

ಮೊಬೈಲ್ ವಾಟ್ಸಾಪ್’ಗೆ “APK ಫೈಲ್ PM KISANA UPDATE” (ಪಿಎಂ ಕಿಸಾನ ಅಪಡೇಟ್) ಎಂಬ ಸಂದೇಶ ಬಂದಿದೆ. ಅದನ್ನು ಡೌನ್ಲೋಡ್ ಮಾಡಿಕೊಂಡ ಬಳಿಕ ಅವರ IDFC ಬ್ಯಾಂಕ್ ಖಾತೆಯಲ್ಲಿ ₹10.000 ಕಟ್ಟಾಗಿರುವ ಕುರಿತು ಮೊಬೈಲ್’ಗೆ ಸಂದೇಶ ಬಂದಿದೆ. ಜೊತೆಗೆ ತಮ್ಮ ಮೊಬೈಲ್ ನಂಬರ್ ನಿಂದ ಸೈಬರ್ ಖದೀಮರು ಇತರೆ ವಾಟ್ಸಾಪ್ ಗ್ರೂಪ್’ಗಳಿಗೆ “APK ಫೈಲ್ KISANA UPDATE” ಸಂದೇಶ ಕಳುಹಿಸಿದ್ದಾರೆ. ಕೂಡಲೆ ಎಚ್ಚೆತ್ತ ಸಿದ್ದಯ್ಯ ಗುರುವಿನ ರವಾನೆಯಾದ APK ಅಪ್ಲಿಕೇಶನ್ ಅನ್ನು ಯಾರೂ ಡೌನ್ಲೋಡ್ ಮಾಡಬೇಡಿ ಎಂದು ಗ್ರೂಪಗಳಿಗೆ ಸಂದೇಶ ಹಾಕಿದ್ದಾರೆ. ಬಳಿಕ ಈ ಕುರಿತು ಸೈಬರ್ ಪೊಲೀಸರಿಗೆ ದೂರು ನೀಡಿರುವುದಾಗಿ ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ.

ಎಚ್ಚರವಾಗಿರಿ : ನಂಬಲರ್ಹವಲ್ಲದ ಮೂಲಗಳಿಂದ ಮೊಬೈಲಿಗೆ ನೀವು ಯಾವುದೇ ಅನುಮಾನಾಸ್ಪದ SMS/ WhatsApp ಅಪ್ಲಿಕೇಶನ್ ಬಂದರೆ ನಿರ್ದಿಷ್ಟ ಮೊಬೈಲ್ ಸಂಖ್ಯೆಗೆ ಕರೆ ಮಾಡಲು ಅಥವಾ ಯಾವುದೇ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಲು ಕೇಳುತ್ತದೆ, ಅದನ್ನು ಸ್ಥಾಪಿಸುವುದು, ಡೌನ್ಲೋಡ್ ಮಾಡುವುದನ್ನು ಮಾಡಬೇಡಿ. ಈ ರೀತಿಯ ಆನ್‌ಲೈನ್ ವಂಚನೆಗಳಿಂದ ಎಚ್ಚರಿಕೆಯಿಂದಿರಲು “ಕೃಷಿಪ್ರಿಯ” ಪತ್ರಿಕೆ ಮೂಲಕ ಓದುಗ ಮಿತ್ರರಿಗೆ ಕೋರಿದ್ದಾರೆ.