ಕುಷ್ಟಗಿ | ಚಿಕ್ಕಮಕ್ಕಳಲ್ಲಿ ಡೆಂಗ್ಯೂ ಜ್ವರ ಶಂಕೆ, ಆತಂಕದಲ್ಲಿ ಜನ

ಸಂಗಮೇಶ ಮುಶಿಗೇರಿ

ಕೃಷಿಪ್ರಿಯ ನ್ಯೂಸ್ |

ಕೊಪ್ಪಳ : ಜಿಲ್ಲೆಯ ಕುಷ್ಟಗಿ ಪಟ್ಟಣದಲ್ಲಿ ಚಿಕ್ಕಮಕ್ಕಳಲ್ಲಿ ಡೆಂಗ್ಯೂ ಜ್ವರದ ಲಕ್ಷಣಗಳು ಪತ್ತೆಯಾಗಿದ್ದು, ಪಾಲಕರಲ್ಲಿ ಆತಂಕ ವ್ಯಕ್ತವಾಗಿದೆ.

ಪಟ್ಟಣದ 19ನೇ ವಾರ್ಡ್ ವ್ಯಾಪ್ತಿಯ ಡಂಬರ ಓಣಿಯ ನಿವಾಸಿಗಳು ಮಾಧ್ಯಮಕ್ಕೆ ಮಾಹಿತಿ ನೀಡಿ, ವಿಜಯಲಕ್ಷ್ಮೀ ತಂದೆ ದ್ಯಾಮಣ್ಣ ಚೂರಿ (10) ಎಂಬ ಬಾಲಕಿ ತೀವ್ರ ಜ್ವರಭಾದೆಯಿಂದ ಕೊಪ್ಪಳ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾಳೆ. ಇವಳಲ್ಲಿ ಡೆಂಗ್ಯೂ ಲಕ್ಷಣಗಳಿರುವ ಬಗ್ಗೆ ವೈದ್ಯರು ಶಂಕೆ ವ್ಯಕ್ತಪಡಿಸಿದ್ದಾರೆ. ಅದೇರೀತಿ ಇದೇ ಪ್ರದೇಶದ ನಿವಾಸಿ ಯಮನೂರಪ್ಪ ಸುರೇಶ ಚೂರಿ (6) ಎಂಬ ಬಾಲಕ, ಸಮೀಪದ ಇಳಕಲ್ ಪಟ್ಟಣದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ರಕ್ತ ತಪಾಸಣೆಗೆ ಒಳಪಡಿಸಿದ ವೈದ್ಯರು ಡೆಂಗ್ಯೂ ಇರುವುದಾಗಿ ಖಚಿತ ಪಡಿಸಿದ್ದಾರೆ. ಬಳಿಕ ಬಾಲಕ, ಬಾಲಕಿಯನ್ನು ಹೆಚ್ಚಿನ ಚಿಕಿತ್ಸೆಗೆ ಇಳಕಲ್ ಮತ್ತು ಕೊಪ್ಪಳ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ಪಾಲಕರು ತಿಳಿಸಿದ್ದಾರೆ.

19 ಮತ್ತು 20ನೇ ವಾರ್ಡ್’ಗಳಲ್ಲಿ ಚರಂಡಿ ಸ್ವಚ್ಛತೆ ನಿರ್ವಹಣೆಯಿಲ್ಲದೆ ಕಾಲುವೆಗಳಲ್ಲಿ ಹೂಳು ತುಂಬಿ ದುರ್ನಾತ ಜೊತೆಗೆ ಸೊಳ್ಳೆಗಳ ಉಪಟಳ ಹೆಚ್ಚಾಗಿದೆ. ಸಧ್ಯ ಓಣಿಯಲ್ಲಿ ಇಬ್ಬರು ಮಕ್ಕಳಿಗೆ ಡೆಂಗ್ಯೂ ಜ್ವರ ಶಂಕೆ ವ್ಯಕ್ತವಾಗಿದ್ದರಿಂದ ಇಲ್ಲಿನ ನಿವಾಸಿಗಳಲ್ಲಿ ಮತ್ತಷ್ಟು ಆತಂಕ ಸೃಷ್ಠಿಸಿದೆ. ಓಣಿಗಳ ಸ್ವಚ್ಛತೆಗೆ ಕ್ರಮ ಕೈಗೊಳ್ಳಲು ಪುರಸಭೆ ಸದಸ್ಯರು ಹಾಗೂ ಅಧಿಕಾರಿಗಳು ಮುಂದಾಗಬೇಕು ಎಂದು ನಿವಾಸಿಗಳು ಒತ್ತಾಯಿಸಿದ್ದಾರೆ.

ಡೆಂಗ್ಯೂ ಪ್ರಕರಣಗಳಿಲ್ಲ: ಕುಷ್ಟಗಿ ಪಟ್ಟಣ ಸೇರಿದಂತೆ ತಾಲೂಕಿನಲ್ಲಿ ಸಧ್ಯ ಯಾವುದೇ ಡೆಂಗ್ಯೂ ಪ್ರಕರಣಗಳಿಲ್ಲ. ಖಾಸಗಿ ಆಸ್ಪತ್ರೆ ಅಥವಾ ರಕ್ತ ತಪಾಸಣಾ ಕೇಂದ್ರಗಳಲ್ಲಿ ಕಿಟ್’ಗಳ ವಿಧಾನದಿಂದ ರಕ್ತ ತಪಾಸಣೆಗೆ ಒಳಪಡಿಸಿ ಡೆಂಗ್ಯೂ ಎಂದರೆ ನಾವು ಒಪ್ಪುವುದಿಲ್ಲ. ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿ ದಾಖಲಾಗಿ ರಕ್ತದ ಮಾದರಿಯನ್ನು ಕೊಪ್ಪಳ ಜಿಲ್ಲಾಸ್ಪತ್ರೆಯ ಡಿಪಿಎಚ್’ಎಲ್ ಲ್ಯಾಬ್ ಮೂಲಕ ತಪಾಸಣೆ ನಡೆಸಿ ಅಲ್ಲಿ ಕನ್ಫರ್ಮ್ ಆದಾಗ ಮಾತ್ರ ಡೆಂಗ್ಯೂ ಪ್ರಕರಣ ಎಂದು ಪರಿಗಣಿಸಿ ಅಗತ್ಯ ಚಿಕಿತ್ಸೆ ನೀಡಲಾಗುತ್ತದೆ. ಶಂಕೆ ಇರುವ ರೋಗಿಗಳು ವಿಳಾಸ ನೀಡಿದರೆ ಅವರನ್ನು ಸಂಪರ್ಕಿಸಿ ರಕ್ತದ ಮಾದರಿ ಸಂಗ್ರಹಿಸಿ, ಜಿಲ್ಲಾಸ್ಪತ್ರೆಗೆ ಕಳುಹಿಸಿಕೊಡಲಾಗುವುದು. ಡೆಂಗ್ಯೂ ಖಚಿತವಾದರೆ ಮುಂದಿನ ಆರೋಗ್ಯಕ್ರಮಕೈಗೊಳ್ಳಲಾಗುವುದು ಎಂದು ತಾಲೂಕು ಆರೋಗ್ಯ ಇಲಾಖೆ ಅಧಿಕಾರಿ ಡಾ.ಆನಂದ ಗೋಟೂರು ಅವರು ತಿಳಿಸಿದರು.