ಶರಣು ಲಿಂಗನಬಂಡಿ
ಕೃಷಿಪ್ರಿಯ ನ್ಯೂಸ್ |
ಕುಷ್ಟಗಿ : ಕಳೆದ 65 ವರ್ಷಗಳ ಹಿಂದೆ ಕಾರಣಾಂತರಗಳಿಂದ ಸ್ಥಗಿತಗೊಂಡಿದ್ದ ಪಟ್ಟಣದ ಗ್ರಾಮದೇವತೆ ಶ್ರೀ ದ್ಯಾಮವ್ವದೇವಿ ಜಾತ್ರಾ ಮಹೋತ್ಸವವನ್ನು ಇತ್ತೀಚೆಗೆ ಸರ್ವ ಸಮುದಾಯದವರೊಂದಿಗೆ ಭಾಗವಹಿಸಿ ಧಾರ್ಮಿಕ ವಿಧಿವಿಧಾನಗಳೊಂದಿಗೆ ಸೇವೆ ಸಲ್ಲಿಸಿ ಅಚ್ಚುಕಟ್ಟಾಗಿ ನಡೆಸಿಕೊಟ್ಟ ವಿಶ್ವಕರ್ಮ ಸಮುದಾಯದ ಹಿರಿಯರು ಮತ್ತು ಯುವಕರನ್ನು ಗುರುವಾರ ಸನ್ಮಾನಿಸಿ ಅಭಿನಂದಿಸಲಾಯಿತು.
ಪಟ್ಟಣದ ಶ್ರೀ ಕಾಳಿಕಾದೇವಿ ದೇವಸ್ಥಾನದಲ್ಲಿ ವಿಶ್ವಕರ್ಮ ಸಮಾಜ ಸಂಘಟನೆಯಿಂದ ಈವೊಂದು ಕಾರ್ಯಕ್ರಮ ಆಯೋಜಿಸಲಾಗಿತ್ತು. ತ್ತೀಚೆಗೆ ನೂತನವಾಗಿ ಆಯ್ಕೆಯಾದ ಜಿಲ್ಲಾ ಗೌರವಾಧ್ಯಕ್ಷರು, ಅಧ್ಯಕ್ಷರು ಸೇರಿದಂತೆ ಸರ್ವ ಆಡಳಿತ ಮಂಡಳಿಯ ನಿರ್ದೇಶಕರುಗಳಿಗೂ ಸಹ ಗೌರವಿಸಲಾಯಿತು.
ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾಧ್ಯಕ್ಷ ಗಂಗಾವತಿಯ ನಾಗೇಶ ಕಂಸಾಲ ಅವರು ಮಾತನಾಡಿ, ಸರ್ವ ಸಮುದಾಯದವರು ಆರಾಧಿಸುವ ಗ್ರಾಮದೇವತೆಯ ಜಾತ್ರೆಯಲ್ಲಿ ಶ್ರಮಿಸಿದ ಯುವಕರಿಗೆ ಸಮಾಜದಿಂದ ಸನ್ಮಾನಿಸಿದ್ದು ಹೆಮ್ಮೆಯ ಸಂಗತಿ. ಸಮಾಜದ ಕಾರ್ಯಗಳನ್ನು ಮಾಡಲು ಯುವಕರು ಮುಂದಾಗಬೇಕು. ಜೊತೆಗೆ ಹಿರಿಯರು ಸಹ ಯುವಕರಿಗೆ ಆಧ್ಯತೆ ನೀಡಿ ಬೆನ್ನುತಟ್ಟುವ ಕೆಲಸ ಮಾಡಬೇಕು. ಅಂದಾಗ ಮಾತ್ರ ಸಮಾಜ ಅಭಿವೃದ್ಧಿ ಹೊಂದಲು ಸಾಧ್ಯ. ಸಮಾಜದ ಅಥವಾ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಮೇಲು ಕೀಳೆನ್ನದೇ ಭ್ರಾತೃತ್ವದ ಭಾವನೆ ಬೆಳೆಸಿಕೊಂಡು ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಿದರೆ ಸಮಾಜ ಏಳಿಗೆಯಾಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಜಿಲ್ಲಾ ಕಾರ್ಯದರ್ಶಿ ಪ್ರಕಾಶ ಹೊಸನಿಂಗಾಪುರ, ಜಿಲ್ಲಾ ಗೌರವಾಧ್ಯಕ್ಷ ಈಶಪ್ಪ ಬಡಿಗೇರ ಅವರು ಮಾತನಾಡಿದರು.
ತಾಲೂಕಾಧ್ಯಕ್ಷ ಶರಣಪ್ಪ ಬಡಿಗೇರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಈ ವೇಳೆ ನಗರ ಘಟಕ ಅಧ್ಯಕ್ಷ ಸಿದ್ದಪ್ಪ ಬಡಿಗೇರ, ಪ್ರಧಾನ ಕಾರ್ಯದರ್ಶಿ ಅನೀಲ ಎಂ. ಕಮ್ಮಾರ, ಬಸವರಾಜ ಬಡಿಗೇರ, ಅಯ್ಯಪ್ಪ ಬಡಿಗೇರ, ಹಾಗೂ ಕಾರ್ಯದರ್ಶಿ ಕೆ. ಆರ್ ಕಮ್ಮಾರ ಹಾಗೂ ನಗರಘಟಕ ಸೇರಿದಂತೆ ಜಿಲ್ಲಾ ಸಮಿತಿಯ ವೀರೇಶ ಪತ್ತಾರ, ರಾಮಚಂದ್ರಪ್ಪ ಬಡಿಗೇರ, ಅಮರೇಶ ವಿಶ್ವಕರ್ಮ, ಮಂಜುನಾಥ ಪತ್ತಾರ, ಯಮನೂರಪ್ಪ ಬಡಿಗೇರ, ಕಾಳಪ್ಪ ಬಡಿಗೇರ, ದೇವೆಂದ್ರಪ್ಪ ಬಡಿಗೇರ, ಮಹಾದೇವಪ್ಪ ಕಮ್ಮಾರ, ಮಾನಪ್ಪ ಕಮ್ಮಾರ, ಶಣ್ಮುಖಪ್ಪ ಬಡಿಗೇರ, ಭೀಮಣ್ಣ ಬಡಿಗೇರ ಇತರರಿದ್ದರು. ಜಿಲ್ಲಾ ಉಪಾಧ್ಯಕ್ಷ ರಾಮಚಂದ್ರಪ್ಪ ಬಡಿಗೇರ ಬ್ಯಾಲಿಹಾಳ ಕಾರ್ಯಕ್ರಮ ನಿರ್ವಹಿಸಿದರು.