ಕುಷ್ಟಗಿ | ವಿಶ್ವ ತಂಬಾಕು ರಹಿತ ದಿನಾಚರಣೆ : ಜನ ಜಾಗೃತಿ ಜಾಥಾಕ್ಕೆ ಚಾಲನೆ

ಶರಣು ಲಿಂಗನಬಂಡಿ

ಕೃಷಿಪ್ರಿಯ ನ್ಯೂಸ್ |

ಕುಷ್ಟಗಿ : ವಿಶ್ವ ತಂಬಾಕು ರಹಿತ ದಿನಾಚರಣೆ ನಿಮಿತ್ತ ಪಟ್ಟಣದ ಜನತೆಗೆ ತಂಬಾಕು ಸೇವನೆಯಿಂದಾಗುವ ದುಷ್ಪರಿಣಾಮಗಳ ಕುರಿತು ಅರಿವು ಮೂಡಿಸುವ ಜನಜಾಗೃತಿ ಜಾಥಾಕ್ಕೆ ತಾಲ್ಲೂಕು ಕಾನೂನು ಸೇವಾ ಸಮಿತಿ ಸದಸ್ಯ ಕಾರ್ಯದರ್ಶಿಗಳು ಹಾಗೂ ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಎಂ.ಎಲ್. ಪೂಜೇರಿ ಅವರು ಚಾಲನೆ ನೀಡಿದರು.

ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಮೇ 31 ಶುಕ್ರವಾರ ಆರೋಗ್ಯ ಇಲಾಖೆ, ತಾಲ್ಲೂಕು ಕಾನೂನು ಸೇವಾ ಸಮಿತಿ ಮತ್ತು ವಕೀಲರ ಸಂಘದ ವತಿಯಿಂದ ಈವೊಂದು ಜಾಗೃತಿ ಜಾಥಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಜನಜಾಗೃತಿ ಜಾಥಾಕ್ಕೂ ಮೊದಲು ನ್ಯಾಯಾಧೀಶರು ಜಾಥಾದಲ್ಲಿ ಪಾಲ್ಗೊಂಡಪ್ರತಿಯೊಬ್ಬರಿಗೂ ತಂಬಾಕು ಮುಕ್ತ ಸಮಾಜದ ಪ್ರತಿಜ್ಞಾ ವಿಧಿ ಬೋಧಿಸಿದರು.

ಈ ವೇಳೆ ತಾಲೂಕು ಆರೋಗ್ಯಾಧಿಕಾರಿ ಡಾ.ಆನಂದ ಗೋಟೂರು ಅವರು ಮಾತನಾಡಿ, ತಂಬಾಕು ಉತ್ಪನ್ನಗಳ ಸೇವನೆಯಿಂದ ನಾನಾ ರೀತಿಯ ಮಾರಕ ಕಾಯಿಲೆಗಳು ಮತ್ತು ಭಯಾನಕ ಕ್ಯಾನ್ಸರ್ ರೋಗಕ್ಕೆ ತುತ್ತಾಗುವ ಸಂಭವವಿದೆ ಎಂದು ತಿಳಿದಿದ್ದರೂ ಜನ ಅದರ ನಿಷ್ಕಾಳಜಿ ವಹಿಸಿ ಚಟಕ್ಕೆ ದಾಸರಾಗಿ ಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆ. ಮನೆಗೆ ಆಧಾರ ಸ್ತಂಭವಾಗಿರುವ ಯಜಮಾನ ತಂಬಾಕು ಸೇವನೆಯಿಂದ ಜೀವ ಕಳೆದುಕೊಂಡರೆ ಅವನ ಸಂಸಾರ ಬೀದಿಗೆ ಬರುತ್ತೆ ಆದ ಕಾರಣ ಜನ ಎಚ್ಚೆತ್ತು ತಂಬಾಕುರಹಿತ ರಾಜ್ಯ ನಿರ್ಮಾಣಕ್ಕೆ ಸಂಕಲ್ಪ ಮಾಡಬೇಕು. ಎಲ್ಲರ ಆರೋಗ್ಯ ಹಿತಾಸಕ್ತಿಗಾಗಿ ತಂಬಾಕು ರಹಿತ ಸಮಾಜ ನಿರ್ಮಾಣಕ್ಕೆ ಜಾಗೃತಿ ಮೂಡಿಸಬೇಕು ಎಂದು ಹೇಳಿದರು.

ಬಳಿಕ ಆರಂಭಗೊಂಡ ಜನಜಾಗೃತಿ ಜಾಥಾ ಡಿ.ವಿ.ಜಿ. ವೃತ್ತ, ಡಾ. ಎಪಿಜೆ ಅಬ್ದುಲ್ ಕಲಾಂ ವೃತ್ತ, ಮಾರುತಿ ವೃತ್ತ, ಬಸವೇಶ್ವರ ವೃತ್ತ, ವಾಲ್ಮೀಕಿ ವೃತ್ತ, ಟಿಪ್ಪು ಸುಲ್ತಾನ್ ವೃತ್ತ ಮಾರ್ಗವಾಗಿ ಸಂಚರಿಸಿ ಮರಳಿ ಆಸ್ಪತ್ರೆಗೆ ಸಂಪನ್ನಗೊಂಡಿತು.

ಜಾಥಾದಲ್ಲಿ ಆಸ್ಪತ್ರೆ ಆಡಳಿತಾಧಿಕಾರಿ ತಜ್ಞವೈದ್ಯ ಡಾ. ಕೆ.ಎಸ್.ರೆಡ್ಡಿ, ವೈದ್ಯಾಧಿಕಾರಿಗಳು, ಆರೋಗ್ಯ ಇಲಾಖೆ ಸಿಬ್ಬಂದಿ ಸೋಮಶೇಖರ್ ಮೇಟಿ, ಸಂಗಯ್ಯ ಕಂಠಿಮಠ, ಪ್ರಕಾಶ ಗುತ್ತೇದಾರ ಸೇರಿದಂತೆ ಸಿಬ್ಬಂದಿ ವರ್ಗ, ಪೊಲೀಸ್ ಇಲಾಖೆ, ಆಶಾ ಕಾರ್ಯಕರ್ತೆಯರು ಭಾಗವಹಿಸಿದ್ದರು.