ಈಶಾನ್ಯ ಪದವೀಧರ ಕ್ಷೇತ್ರದ ಚುನಾವಣೆ : ಕುಷ್ಟಗಿ ವಿಧಾನಸಭಾ ಕ್ಷೇತ್ರದಲ್ಲಿ ಶೇ.84.62 ರಷ್ಟು ಮತದಾನ

ಸಂಗಮೇಶ ಮುಶಿಗೇರಿ

ಕೃಷಿಪ್ರಿಯ ನ್ಯೂಸ್ |

ಕುಷ್ಟಗಿ : 2024ರ ಈಶಾನ್ಯ ಕರ್ನಾಟಕ ಪದವೀಧರ ಕ್ಷೇತ್ರದ ವಿಧಾನಪರಿಷತ್ ಚುನಾವಣೆ ಅಂಗವಾಗಿ ಜೂ.3 ಸೋಮವಾರ ಕುಷ್ಟಗಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪಟ್ಟಣ ಸೇರಿದಂತೆ 5 ಹೋಬಳಿ ಮತಗಟ್ಟೆಗಳಲ್ಲಿ ಸಂಜೆ 4 ಗಂಟೆ ವೇಳೆಗೆ ಶೇ.84.62ರಷ್ಟು ಮತದಾನ ಆಗಿದೆ.

ಕುಷ್ಟಗಿ ಪಟ್ಟಣದ ಹನುಮಸಾಗರ ರಸ್ತೆಯ ಸರಕಾರಿ ಬಾಲಕರ ಹಿರಿಯ ಪ್ರಾಥಮಿಕ ಶಾಲೆ (ಪೂರ್ವ ಎಡಭಾಗ), ಸರಕಾರಿ ಬಾಲಕರ ಹಿರಿಯ ಪ್ರಾಥಮಿಕ ಶಾಲೆ (ಪಶ್ಚಿಮಭಾಗ), ಹನುಮಸಾಗರ ಗ್ರಾಮ ಪಂಚಾಯತ ಕಾರ್ಯಾಲಯ, ಹನುಮನಾಳ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ತಾವರಗೇರಾ ಪಟ್ಟಣ ಪಂಚಾಯತ ಕಾರ್ಯಾಲಯದಲ್ಲಿ ಸ್ಥಾಪಿಸಲಾಗಿದ್ದ ಮತಗಟ್ಟೆಗಳಿಗೆ ಪದವೀಧರ ಮತದಾರರು ಹುರುಪಿನಿಂದ ಆಗಮಿಸಿ ತಮ್ಮ ಹಕ್ಕು ಚಲಾಯಿಸಿದರು.

ತಾಲೂಕಿನ ಒಟ್ಟು 2224 ಪದವೀಧರ ಮತದಾರರಲ್ಲಿ 1360 ಪುರುಷರು, 522 ಮಹಿಳೆಯರು ಸೇರಿ ಒಟ್ಟು 1882 ಜನ ಹಕ್ಕು ಚಲಾಯಿಸಿದ್ದಾರೆ.

ತಹಸಿಲ್ದಾರ್ ರವಿ ಎಸ್. ಅಂಗಡಿ, ಗ್ರೇಟ್-2 ತಹಸೀಲ್ದಾರ್ ಮುರಳೀಧರ ಮುಕ್ತೇದಾರ, ಉಪ ತಹಶೀಲ್ದಾರ ಪ್ರಕಾಶ್ ಅವರು ಹೋಬಳಿಗಳ ವ್ಯಾಪ್ತಿಯ ಆಯಾ ಮತಗಟ್ಟೆಗಳಿಗೆ ಕಂದಾಯ ನಿರೀಕ್ಷಕರಾದ ಶರಣಯ್ಯ, ಶರಣಪ್ಪ ಅವರೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಬಿಜೆಪಿಯ ವಿಧಾನಸಭಾ ವಿರೋಧ ಪಕ್ಷದ ಮುಖ್ಯ ಸಚೇತಕ ಹಾಗೂ ಶಾಸಕ ದೊಡ್ಡನಗೌಡ ಪಾಟೀಲ್ ಅವರು ತಾಲೂಕಿನ ಐದೂ ಮತಗಟ್ಟೆಗಳಿಗೆ ಭೇಟಿ ನೀಡಿ ಮತದಾನ ಪ್ರಕ್ರಿಯೆ ವೀಕ್ಷಿಸಿದರು.

ಅದೇರೀತಿ, ಬೆಳಿಗ್ಗೆ ಪಟ್ಟಣದ ಹನುಮಸಾಗರ ರಸ್ತೆ ಬಳಿಯ ಸರಕಾರಿ ಬಾಲಕರ ಹಿರಿಯ ಪ್ರಾಥಮಿಕ ಶಾಲೆ ಮತಗಟ್ಟೆಗೆ ಆಗಮಿಸಿದ ಮಾಜಿ ಸಚಿವ ಅಮರೇಗೌಡ ಪಾಟೀಲ್ ಬಯ್ಯಾಪೂರ ತಮ್ಮ ಬೆಂಬಲಿತರೊಂದಿಗೆ ಆಗಮಿಸಿ ಹಕ್ಕು ಚಲಾಯಿಸಿದರು. ಬಳಿಕ ಶಾಯಿ ಪ್ರದರ್ಶಿಸುವ ಮೂಲಕ ಕಾಂಗ್ರೆಸ್ ಅಭ್ಯರ್ಥಿ ಡಾ.ಚಂದ್ರಶೇಖರ್ ಪಾಟೀಲ್ ಅವರು ಜಯಶಾಲಿಯಾಗಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.