ಕೊಪ್ಪಳ | ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು : ಕಾರ್ಯಕರ್ತರ ವಿಜಯೋತ್ಸವ

ಸಂಗಮೇಶ ಮುಶಿಗೇರಿ

ಕೃಷಿಪ್ರಿಯ ನ್ಯೂಸ್ |

ಕೊಪ್ಪಳ : ಲೋಕಸಭಾ ಚುನಾವಣೆಯ ಫಲಿತಾಂಶ ಹೊರಬೀಳುತಿದ್ದಂತೆ ಕಾಂಗ್ರೆಸ್ ಅಭ್ಯರ್ಥಿ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಮಂಗಳವಾರ ಮದ್ಯಾಹ್ನ ವೇಳೆ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು.

ಕಾಂಗ್ರೆಸ್ ಅಭ್ಯರ್ಥಿ ರಾಜಶೇಖರ ಹಿಟ್ನಾಳ ಅವರು ಬಿಜೆಪಿ ಅಭ್ಯರ್ಥಿ ಡಾ.ಬಸವರಾಜ ಕ್ಯಾವಟರ್ ಅವರನ್ನು ಪರಾಭವಗೊಳಿಸಿದ್ದಾರೆ. ರಾಜಶೇಖರ ಹಿಟ್ನಾಳ ಗೆಲುವಿಗೆ ಜಿಲ್ಲೆಯ ಕುಷ್ಟಗಿ ತಾಲೂಕಿನಾದ್ಯಂತ ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರು ಪರಸ್ಪರ ಬಣ್ಣ ಎರಚಿ, ಪಟಾಕಿ ಸಿಡಿಸಿ, ಸಿಹಿ ಹಂಚಿ ಕುಣಿದು ಕುಪ್ಪಳಿಸಿದರು.

ಇತ್ತ ಬಯ್ಯಾಪೂರ ಅವರ ನಿವಾಸದಲ್ಲಿ ಸಮಾವೇಶಗೊಂಡ ಕಾರ್ಯಕರ್ತರು ಮಾಜಿ ಸಚಿವ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಮರೇಗೌಡ ಪಾಟೀಲ್ ಬಯ್ಯಾಪೂರ ಹಾಗೂ ಅವರ ಪುತ್ರ ದೊಡ್ಡಬಸನಗೌಡ ಪಾಟೀಲ್ ಬಯ್ಯಾಪೂರ ಅವರಿಗೆ ಬಣ್ಣ ಎರಚಿ ಸಿಹಿ ತಿನ್ನಿಸಿ, ಶಾಲು ಹೊದಿಸಿ, ಹೂಮಾಲೆ ಹಾಕಿ ಗೌರವಿಸಿ ಜಯಘೋಷ ಮೊಳಗಿಸಿ ಸಂಭ್ರಮಿಸಿದರು.

ಬಯ್ಯಾ.. ವೀಡಿಯೊ ಮತ್ತೆ ವೈರಲ್ : ಚುನಾವಣೆಗೂ ಮುನ್ನ ತಳುವಗೇರಾ ಗ್ರಾಮದಲ್ಲಿ ಅಮರೇಗೌಡ ಪಾಟೀಲ್ ಬಯ್ಯಾಪೂರ ಅವರು ಅಭ್ಯರ್ಥಿ ಪರ ಪಕ್ಷದ ಪ್ರಚಾರ ಸಭೆಯಲ್ಲಿ ಪಕ್ಷ ನಿಷ್ಠೆ ಕುರಿತು ಮಾತನಾಡಿದ್ದರು. ‘ಅಮರೇಗೌಡರು ಏನುಮಾಡುತ್ತಾರೆ ಎಂಬುದು ತಾಲೂಕಿನ ಜನತೆಗೆ ಗೊತ್ತಿದೆ. ಯಾವ ಪಕ್ಷಕ್ಕೆ ಮಾತು ಕೊಟ್ಟಿರುತ್ತೀವಿ ಅದಕ ಪ್ರಾಮಾಣಿಕವಾಗಿ ಶರಣಬಸ್ಸಪ್ಪನ ಆಣೆಯಾಗಿ ದುಡಿಯುತ್ತೀವಿ ನಾವು, ಒಬ್ಬರಿಗೆ ಹುಟ್ಟಿ ಇನ್ನೊಬ್ಬರ ಹೆಸರು ಹೇಳೋರಲ್ಲ ನಾವು, ಅವರು ಬ್ಯಾರೆ ಅದಾರ ಜನಾರ್ಧನರೆಡ್ಡಿ ಅಂತವರು ಅದಾರ’ ಎಂದು ಮಾತನಾಡಿರುವ ವೀಡಿಯೊ ಮತ್ತೆ ವೈರಲ್ ಆಗಿದೆ.