ಕುಂಬಳಾವತಿ | ಸಿಡಿಲು ಬಡಿದು ಆಕಳು ಸಾವು

ಸಂಗಮೇಶ ಮುಶಿಗೇರಿ

ಕೃಷಿಪ್ರಿಯ ನ್ಯೂಸ್ |

ಕೊಪ್ಪಳ : ಸಿಡಿಲು ಬಡಿದು ಆಕಳೊಂದು ಮೃತಪಟ್ಟ ಘಟನೆ ಜಿಲ್ಲೆಯ ಕುಷ್ಟಗಿ ತಾಲೂಕಿನ ಕುಂಬಳಾವತಿ ಗ್ರಾಮದ ಸೀಮೆಯಲ್ಲಿ ಬುಧವಾರ ಮದ್ಯಾಹ್ನ ನಡೆದಿದೆ.

ಗ್ರಾಮದ ಸೋಮಪ್ಪ ಪೂಜಾರ್ ಎಂಬವರಿಗೆ ಸೇರಿದ ಆಕಳು ಇದಾಗಿದೆ. ಮದ್ಯಾಹ್ನ 2.30ರ ಸುಮಾರಿಗೆ ರೈತ ತಮ್ಮ ಜಮೀನಿನಲ್ಲಿ ಮರಕ್ಕೆ ಆಕಳನ್ನು ಕಟ್ಟಿಹಾಕಿ ಊಟಕ್ಕೆ ತೆರಳುವಾಗ ಗುಡುಗು ಮಿಂಚು ಗಾಳಿ ಸಹಿತ ಆರ್ಭಟಿಸಿದ ಮಳೆಯಲ್ಲಿ ಸಿಡಿಲು ಬಡಿದ ಪರಿಣಾಮ ಆಕಳು ಸ್ಥಳದಲ್ಲೇ ಅಸುನೀಗಿದೆ. ಅದೃಷ್ಟವಶಾತ್ ಮರದಿಂದ ಕೂಗಳತೆ ದೂರದಲ್ಲಿದ್ದ ರೈತ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ಇತ್ತೀಚೆಗೆ ಕರು ಹಾಕಿದ್ದ ಆಕಳು ನಿತ್ಯ ಎಂಟತ್ತು ಲೀ. ಹಾಲು ನೀಡುತಿತ್ತು. ಇದರಿಂದ ರೈತನ ಕುಟುಂಬಕ್ಕೆ ಆಕಳು ಆಸರೆಯಾಗಿತ್ತು. ಸುಮಾರು 45 ಸಾವಿರ ರೂಪಾಯಿ ಬೆಲೆಬಾಳುವ ಆಕಳನ್ನು ಕಳೆದುಕೊಂಡಿರುವ ರೈತ ಚಿಂತೆಗೀಡಾಗಿದ್ದಾನೆ. ಕೂಡಲೆ ಅಧಿಕಾರಿಗಳು ಸ್ಥಳಕ್ಕೆ ಭೇಟಿನೀಡಿ ಪರಿಶೀಲಿಸಬೇಕು. ಸಂಕಷ್ಟದಲ್ಲಿರುವ ರೈತನಿಗೆ ಸರ್ಕಾರದಿಂದ ಪರಿಹಾರ ಕಲ್ಪಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.