ಕೊಪ್ಪಳ : ಶರಣ ಹಡಪದ ಅಪ್ಪಣ್ಣನವರು ಜಾತಿ, ಧರ್ಮ, ವರ್ಣ ಹಾಗೂ ವರ್ಗರಹಿತ ಸಮಾಜ ನಿರ್ಮಾಣಕ್ಕೆ ಶ್ರಮಿಸಿದ್ದಾರೆ ಎಂದು ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ ಹೇಳಿದರು.
ಜಿಲ್ಲೆಯ ಕುಷ್ಟಗಿ ಪಟ್ಟಣದ ಗೌರಿ ನಗರದಲ್ಲಿ ನಿರ್ಮಿಸಿದ ನೂತನ ನಿಜಸುಖಿ ಹಡಪದ ಅಪ್ಪಣ್ಣ ಸಮುದಾಯ ಭವನವನ್ನು ಶನಿವಾರ ಉದ್ಘಾಟಿಸಿ ಮಾತನಾಡಿದರು. ಅಪ್ಪಣ್ಣನವರು 12ನೇ ಶತಮಾನದ ವಚನ ಚಳವಳಿ ಮತ್ತು ಸಾಮಾಜಿಕ ಕ್ರಾಂತಿಯ ಹರಿಕಾರರಲ್ಲಿ ಒಬ್ಬರಾಗಿದ್ದಾರೆ. ಅನುಭವ ಮಂಟಪ ಹಾಗೂ ಬಸವಣ್ಣನವರ ಕಾಯಕಕ್ಕೆ ಹಡಪದ ಅಪ್ಪಣ್ಣನವರು ಆಧಾರ ಸ್ತಂಭವಾಗಿದ್ದರು. ಬಸವಣ್ಣನವರ ಕಲ್ಯಾಣ ರಾಜ್ಯ ನಿರ್ಮಾಣಕ್ಕೆ ಅಪ್ಪಣ್ಣನವರು ಕೂಡ ಸಲಹೆಗಾರರಾಗಿದ್ದರು. ಇವರ ಬದುಕು ಸಾಧನೆ ಇಡೀ ಇಡೀ ಮಾನವ ಸಮಾಜಕ್ಕೆ ಮಾದರಿಯಾಗಿದೆ ಎಂದು ಹೇಳಿದರು.
ಹಡಪದರು ಮಾದರಿ : ಪ್ರತಿ ಸಮುದಾಯ ತಮಗೆ ಭವನಕ್ಕಾಗಿ ಸರಕಾರದ ಅನುದಾನ ನಿರೀಕ್ಷಿಸುವ ಕಾಲ ಘಟ್ಟದಲ್ಲಿ ಸ್ಥಳೀಯ ಹಡಪದ ಸಮಾಜದವರು ಆರ್ಥಿಕವಾಗಿ ಸ್ಥಿತಿವಂತರಲ್ಲದಿದ್ದರೂ ಸ್ವಂತ ಖರ್ಚಿನಲ್ಲಿಯೇ ಸಮುದಾಯ ಭವನ ನಿರ್ಮಿಸಿಕೊಂಡಿದ್ದು ಇತರೆ ಸಮುದಾಯಗಳಿಗೆ ಮಾದರಿಯಾಗಿದ್ದಾರೆ. ಇವರ ಬೇಡಿಕೆಗಳಿಗೆ ಸ್ಪಂದಿಸಿ ಅಗತ್ಯ ನೆರವು, ಸಹಕಾರ ನೀಡುವುದಾಗಿ ಶಾಸಕ ಅಮರೇಗೌಡ ಬಯ್ಯಾಪೂರ ಭರವಸೆ ನೀಡಿದರು.
ಸಾನ್ನಿಧ್ಯವಹಿಸಿದ್ದ ಮದ್ದಾನಿ ಹಿರೇಮಠದ ಕರಿಬಸವ ಸ್ವಾಮೀಜಿ ಮಾತನಾಡಿ, ಹಡಪದ ಸಮುದಾಯ ಅಭಿವೃದ್ಧಿ ಹೊಂದಲು ಸಮಾಜದ ಪ್ರತಿಯೊಬ್ಬರು ಸಂಘಟಿತರಾಗಿ ಪ್ರೇಮ, ಭಾಂದವ್ಯ ಬೆಳಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಇದೇವೇಳೆ ಸಮುದಾಯ ಭವನಕ್ಕೆ ಭೂದಾನ ಮಾಡಿದ ದಿ. ಶಿವರಾಜ ನಿಲೋಗಲ್ ಅವರ ಪುತ್ರ ನೀಲಕಂಠ ಬಾಬು ಹಾಗೂ ಇಂಜಿನೀಯರ್ ಆದೇಶ ಅವರನ್ನು ಹಡಪದ ಸಮಾಜದಿಂದ ಗೌರವಿಸಲಾಯಿತು. ಪುರಸಭೆ ಅಧ್ಯಕ್ಷ ಗಂಗಾಧರ ಹಿರೇಮಠ ಅಧ್ಯಕ್ಷತೆವಹಿಸಿದ್ದರು. ಹಡಪದ ಸಮುದಾಯದ ಗೌರವಾಧ್ಯಕ್ಷ ದೊಡ್ಡಪ್ಪ ಹೊಸೂರು ಅಧ್ಯಕ್ಷ ಎಚ್. ಪುತ್ರಪ್ಪ, ಉಪಾಧ್ಯಕ್ಷರಾದ ರುದ್ರಪ್ಪ ಹಡಪದ, ಶಿವಪ್ಪ ಇಟ್ಟಂಗಿ, ಕಾರ್ಯದರ್ಶಿ ಮಹಾಂತೇಶ ಅಮರಾವತಿ, ಖಜಾಂಚಿ ಶರಣಪ್ಪ ಆಡೂರು ಇತರರು ಉಪಸ್ಥಿತರಿದ್ದರು. ಶರಣಬಸವ ಲಿಂಗನಬಂಡಿ ಪ್ರಾರ್ಥಿಸಿದರು. ಎಚ್. ಜಿ ಮಹೇಶ್ ಕಾರ್ಯಕ್ರಮ ನಿರೂಪಿಸಿದರು. ಮಹಾಂತೇಶ ಅಮರಾವತಿ ವಂದಿಸಿದರು.