ತೋಪಲಕಟ್ಟಿ | ಅಬ್ಬರದ ಮಳೆಗೆ ಪಪ್ಪಾಯಿ, ಇಸ್ಮೆಕ್ಕಿ ಬೆಳೆ ಹಾನಿ

ಸಂಗಮೇಶ ಮುಶಿಗೇರಿ

ಕೃಷಿಪ್ರಿಯ ನ್ಯೂಸ್ |

ಕೊಪ್ಪಳ : ಮೃಗಶಿರೆಯಲ್ಲಿ ಮಿಸುಗಾಡದೆ ನೆರೆಬಂತು ಎಂಬ ನಾಡ್ನುಡಿ ಸುಳ್ಳಲ್ಲ. ಜಿಲ್ಲೆಯ ಕುಷ್ಟಗಿ ತಾಲೂಕಿನ ತೋಪ್ಪಲಕಟ್ಟಿ ಗ್ರಾಮದ ಜಮೀನಿನಲ್ಲಿ ಬೆಳೆಯಲಾಗಿದ್ದ ಪಪ್ಪಾಯಿ ಹಾಗೂ ಇಸ್ಮೆಕ್ಕಿ ಬೆಳೆ ಗುರುವಾರ ಸಂಜೆ ಸುರಿದ ಅಬ್ಬರದ ಮೃಗಶಿರ ಮಳೆಗೆ ಸಂಪೂರ್ಣ ಜಲಾವೃತಗೊಂಡು ಹಾನಿ ಸಂಭವಿಸಿದೆ.

ಹನುಮಸಾಗರ ಹೋಬಳಿ ಅಡವಿಬಾವಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತೋಪಲಕಟ್ಟಿ ಸೀಮಾದ ಚಂದಪ್ಪ ಅಯ್ಯಪ್ಪ ಜಂಗಣ್ಣಿ ಎಂಬ ರೈತನಿಗೆ ಸೇರಿದ ಜಲಾವೃತಗೊಂಡ 6 ಎಕರೆ ಜಮೀನು ಇದಾಗಿದೆ. ರೈತ ಚಂದಪ್ಪ ಸಾಲ ಸೋಲ ಮಾಡಿ 4 ಎಕರೆ ಪ್ರದೇಶದಲ್ಲಿ ಪಪ್ಪಾಯಿ ಮತ್ತು 2 ಎಕರೆ ಪ್ರದೇಶದಲ್ಲಿ ಇಸ್ಮಕ್ಕಿ ಬೆಳೆದಿದ್ದ. ಇನ್ನೇನು ಬೆಳೆ ಪಸಲು ನೀಡುವ ಹಂತದಲ್ಲಿರುವಾಗ ಅಬ್ಬರದ ಮಳೆಗೆ ಜಲಾವೃತಗೊಂಡು ಲಕ್ಷಾಂತರ ರೂಪಾಯಿ ಹಾನಿ ಸಂಭವಿಸಿದೆ.

ಸಂಬಂಧಿಸಿದ ತೋಟಗಾರಿಕೆ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿನೀಡಿ ಪರಿಶೀಲಿಸಬೇಕು. ಬೆಳೆ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿರುವ ರೈತನಿಗೆ ಸರ್ಕಾರದಿಂದ ಪರಿಹಾರ ಕಲ್ಪಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ತಾಲೂಕಿನಲ್ಲಿ ಬುಧವಾರ ಸುರಿದ ಮಳೆಯ ಪ್ರಮಾಣ ಹೀಗಿದೆ :
ಕುಷ್ಟಗಿ – 59.2 ಮಿಲಿ ಮೀ.
ಹನುಮಸಾಗರ – 28.2 ಮಿಲಿ ಮೀ.
ಹನುಮನಾಳ – 19.0 ಮಿಲಿ ಮೀ.
ದೋಟಿಹಾಳ – 14.1 ಮಿಲಿ ಮೀ.
ಕಿಲ್ಲಾರಟ್ಟಿ – 11.2 ಮಿಲಿ ಮೀ.
ತಾವರಗೇರಾ – 34.0 ಮಿಲಿ ಮೀ. ಮಳೆಯಾಗಿದೆ ಎಂದು ಕಂದಾಯ ಇಲಾಖೆ ಮಾಹಿತಿ ನೀಡಿದೆ.

  • ತಾಲೂಕಿನಲ್ಲಿ ನಿತ್ಯ ಮಳೆ ಸುರಿಯುತ್ತಿರುವ ಹಿನ್ನೆಲೆ ಮಣ್ಣಿನ ಮನೆಗಳಲ್ಲಿರುವ ನಿವಾಸಿಗಳು ಮುಂಜಾಗ್ರತೆಯಿಂದ ಇರಬೇಕು. ಸುರಕ್ಷಿತ ಸ್ಥಳಗಳಲ್ಲಿ ವಾಸಿಸಬೇಕು ಎಂದು ಕಂದಾಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.