ಕುಷ್ಟಗಿ | ಹರ್ ಘರ್ ಜಲ್ ಘೋಷಣೆಗೆ ಜಿ.ಪಂ. ಉಪ ಕಾರ್ಯದರ್ಶಿ ಕರೆ

ಸಂಗಮೇಶ ಮುಶಿಗೇರಿ

ಕೃಷಿಪ್ರಿಯ ನ್ಯೂಸ್ |

ಕುಷ್ಟಗಿ : ಜಲ ಜೀವನ್ ಮಷಿನ ಯೋಜನೆಯಡಿ ಪೂರೈಕೆಯಾಗುತ್ತಿರುವ 24×7 ನಲ್ಲಿಗಳ ಸಂಪರ್ಕಗಳನ್ನು ಗ್ರಾ.ಪಂ. ಸುಪರ್ದಿಗೆ ಪಡೆದು ಹರ್ ಘರ್ ಜಲ್ ಘೋಷಣೆ ಮಾಡುವಂತೆ ಅಭಿವೃದ್ಧಿ ಅಧಿಕಾರಿಗಳಿಗೆ ಜಿ.ಪಂ ಉಪ ಕಾರ್ಯದರ್ಶಿ ಹಾಗೂ ತಾ.ಪಂ. ಆಡಳಿತಾಧಿಕಾರಿ ಮಲ್ಲಿಕಾರ್ಜುನ ತೊದಲಬಾಗಿ ಹೇಳಿದರು.

ಪಟ್ಟಣದ ತಾ.ಪಂ. ಸಭಾಂಗಣದಲ್ಲಿ ಗುರುವಾರ ನಡೆದ ಕೆಡಿಪಿ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಜಿಲ್ಲೆಯಲ್ಲಿ 90 ಹಳ್ಳಿಗಳನ್ನು ಹರಗರ್ ಜಲ್ ಎಂದು ಘೋಷಣೆ ಮಾಡಬೇಕಾಗಿದೆ. ಆಯಾ ಗ್ರಾ.ಪಂ. ಅಧ್ಯಕ್ಷರ ಮನ ಒಲಿಸಿ, ಗ್ರಾಮ ಸಭೆ, ಸಾಮಾನ್ಯ ಸಭೆ ಮಾಡಿ ಅನುಮೋದನೆ ಪಡೆದು ಹರ್ ಗರ್ ಜಲ್ ಘೋಷಣೆ ಮಾಡಿ. ಪೈಪ್ ಲಿಕೇಜ್ ಕಂಡುಬಂದಲ್ಲಿ ಗುತ್ತಿಗೆದಾರ ಮೂಲಕ ಸರಿಪಡಿಸಿ. ಪಂಚಾಯಿತಿ ಸುಪರ್ದಿಗೆ ಪಡೆಯದಿದ್ದರೆ ತಪ್ಪಾಗುತ್ತದೆ. ಒಂದು ವರ್ಷ ಕಾಲ ಗುತ್ತಿಗೆದಾರರಿಗೆ ಕಾಮಗಾರಿ ನಿರ್ವಹಣೆ ಹೊಣೆ ಇರುತ್ತದೆ ಎಂದ ಅವರು, ಮಳೆಗಾಲ ಹಿನ್ನೆಲೆ ಪ್ರತಿ ಗ್ರಾಮ ಪಂಚಾಯಿತಿಯಿಂದ ಪೂರೈಕೆಯಾಗುವ ಕೊಳವೆಬಾವಿ ಕುಡಿಯುವ ನೀರನ್ನು ಕಡ್ಡಾಯವಾಗಿ ಪರೀಕ್ಷೆ ಮಾಡಲೇಬೇಕು. RWS ನಿಂದ ನೀರು ಪರೀಕ್ಷೆಯಾದರೂ ಕೂಡಾ ಗ್ರಾ.ಪಂ. ಕಾಳಜಿಯಿಂದ ನೀರು ಪರೀಕ್ಷೆಗೊಳಪಡಿಸಬೇಕು ಎಂದು ಪಿಡಿಒಗಳಿಗೆ ತಿಳಿಸಿದರು.

ಅಂಗನವಾಡಿ ಕೇಂದ್ರ, ಶಾಲೆಗಳಿಗೆ ನೀರಿನ ಸಮಸ್ಯೆ ಆಗಕೂಡದು, ಸಿಡಿಪಿಒ ಹಾಗೂ ಬಿಇಒ ಅವರು ಸಮೀಕ್ಷೆ ಮಾಡಿ ಎಇಇ ಅವರಿಗೆ ವರದಿ ಸಲ್ಲಿಸಿ ನೀರಿನ ವ್ಯವಸ್ಥೆ ಕಲ್ಪಿಸಿಕೊಡಬೇಕು. ಜೊತೆಗೆ
ಆಯಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಪ್ರತಿ ಅಂಗನವಾಡಿ, ಶಾಲೆಗಳಿಗೆ, ವಸತಿ ಶಾಲೆಗಳಿಗೆ ಪಿಡಿಒಗಳು ಸಮನ್ವಯಾಧಿಕಾರಿಯಾಗಿ ಭೇಟಿ ನೀಡಿ ಮೂಲಸೌಕರ್ಯ, ಸ್ವಚ್ಛತೆ ಗಮನಿಸಬೇಕು ಹಾಗೂ ಅಲ್ಲಿ ತಯಾರಿಸುವ ಅಡುಗೆ ಸ್ವಾದ ಆಹಾರ ಗುಣಮಟ್ಟ ಪರಿಶೀಲಿಸಬೇಕು. ತೊಂದರೆ ಕಂಡುಬಂದಲ್ಲಿ ಇಒ ಅವರಿಗೆ ವರದಿ ಸಲ್ಲಿಸಿ ಎಂದು ಸೂಚಿಸಿದರು.

ಆಯವ್ಯಯ ಮಂಡನೆ : ಲೈನ್ ಡಿಪಾರ್ಟಮೆಂಟ್ ಮತ್ತು ತಾಲೂಕು ಪಂಚಾಯಿತಿ ಸೇರಿ 2023-24ನೇ ಸಾಲಿನ ವಾರ್ಷಿಕ ಲೆಕ್ಕ ಪತ್ರಕ್ಕೆ ಸಂಬಂಧಿಸಿದಂತೆ ಒಟ್ಟು  ₹169 ಕೋಟಿ 95 ಲಕ್ಷ 44 ಸಾವಿರ ವಿದ್ದು, ಅದರಲ್ಲಿ ₹141 ಕೋಟಿ 72 ಲಕ್ಷದ 61 ಸಾವಿರ ಖರ್ಚಾಗಿದೆ. 2024-25ನೇ ಸಾಲಿನಲ್ಲಿ ₹149 ಕೋಟಿ 6 ಲಕ್ಷದ 48 ಸಾವಿರವಿರುವ ಲೆಕ್ಕ ಮಂಡಿಸಲಾಯಿತು. ಅದರಲ್ಲಿ ಸಂಬಳವಲ್ಲದ 5 ಶಾಲೆಗಳಿಗೆ ಮೀಸಲಿಟ್ಟ 36 ಲಕ್ಷದ 42 ಸಾವಿರ ಹಾಗೆ ಪ್ರೌಢ ಶಾಲೆಗೆ ₹26 ಲಕ್ಷ ಚಿಲ್ಲರೆ ಇದ್ದು ಬಿಡುಗಡೆ ಮಾಡಬಹುದಾಗಿದೆ ಎಂದು ಸಭೆಯ ಗಮನಕ್ಕೆ ತರಲಾಯಿತು.

ಶಾಲಾ ಶೌಚಾಲಯ ಸ್ವಚ್ಛತೆಗೆ ಪೌರಕಾರ್ಮಿಕರ ನೇಮಿಸಿ : ತಾಲೂಕಿನ 22 ಕ್ಲಸ್ಟರ್ಗಳಿಗೆ 22 ಜನ ಪೌರಕಾರ್ಮಿಕರನ್ನು ನೇಮಕ ಮಾಡಿಕೊಳ್ಳಿ, ಪ್ರತಿ ಹದಿನೈದು ದಿನಕ್ಕೆ ಒಮ್ಮೆ ಶಾಲೆಗಳ ಶೌಚಾಲಯ ಸ್ವಚ್ಛತೆ ಕಾರ್ಯ ಮಾಡಿಸಿ. ಶಾಲಾ ಶೌಚಾಲಯ ಸ್ವಚ್ಛತೆಗೆ ಸಂಬಳವಲ್ಲದ ಅನುದಾನ ಬಳಸಲು ಅವಕಾಶವಿದ್ದು, ಉಪಯೋಗಿಸಿಕೊಳ್ಳಿ. ₹26 ಲಕ್ಷ ಅನುದಾನದಲ್ಲಿ ಪ್ರೌಢ ಶಾಲೆಗಳಿಗೆ ಎಲ್ಲೆಲ್ಲಿ ವಾಟರ್ ಪ್ಯೂರಿಫೈಡ್ ಇಲ್ಲ ಅಲ್ಲಲ್ಲಿ ವಿದ್ಯಾರ್ಥಿಗಳಿಗೆ ಶುದ್ಧ ಕುಡಿಯುವ ನೀರು ಒದಗಿಸಲು ಉತ್ತಮ ಗುಣಮಟ್ಟದ ವಾಟರ್ ಪ್ಯೂರಿಫೈಡ್ ಕೊಡಿಸಿ ಎಂದು ಶಿಕ್ಷಣ ಇಲಾಖೆ ಯೋಜನಾ ಅಧಿಕಾರಿಗೆ ಉಪ ಕಾರ್ಯದರ್ಶಿಗಳು ಸೂಚಿಸಿದರು. ₹2 ಲಕ್ಷ ಚಿಲ್ಲರೆ ಹಣವನ್ನು ಬಿಸಿಎಂ ವಸತಿ ಶಾಲೆಗೆ, ₹38 ಲಕ್ಷ ಚಿಲ್ಲರೆ ಜನರಲ್ ಮತ್ತು ಎಸ್ಸಿ ಎಸ್ಟಿ ವಸತಿ ಶಾಲೆಗಳಿಗೆ ಮೀಸಲಿಡಲಾಗಿದೆ. ₹24 ಲಕ್ಷ ಪಶುವೈದ್ಯಕೀಯಕ್ಕೆ ತೆಗೆದಿರಿಸಲಾಗಿದ್ದು, ಅಗತ್ಯ ವಸ್ತುಗಳ ಖರೀದಿಗೆ ಉಪಯೋಗಿಸಲು ಪಶು ವೈದ್ಯರಿಗೆ ಸೂಚಿಸಿದರು.

  • ಎಸ್ಸೆಸ್ಸೆಲ್ಸಿಯಲ್ಲಿ ಅನುತ್ತೀರ್ಣರಾಗುವ ವಿದ್ಯಾರ್ಥಿಗಳ ಉತ್ತೀರ್ಣತೆಗೆ ಸಂಪನ್ಮೂಲ ಶಿಕ್ಷಕರನ್ನು ಒಂದು ಶಾಲೆಯಿಂದ ಇನ್ನೊಂದು ಶಾಲೆಗೆ ಕಳುಹಿಸಿ ಅವರಿಂದ ಪಾಠ ಮಾಡಿಸಿ. ವಿದ್ಯಾರ್ಥಿಗಳಿಗೆ ಹೆಚ್ಚುವರಿ ಕ್ಲಾಸ್ ನಡೆಸಿ. ಮತ್ತು ಪಾಲಕರ ಮನೆಗೆ ಭೇಟಿ ನೀಡುವ ವ್ಯವಸ್ಥೆ ಆಗಬೇಕು. ಜೊತೆಗೆ ವಿದ್ಯಾಭ್ಯಾಸದಲ್ಲಿ ಹಿಂದೆ ಉಳಿದಿರುವ ವಿದ್ಯಾರ್ಥಿಯ ಮನೆಯ ಪಕ್ಕದಲ್ಲಿ ಓದಿನಲ್ಲಿ ಮುಂದಿರುವ ವಿದ್ಯಾರ್ಥಿ ಪಕ್ಕದಲ್ಲಿ ಕೂಡಿಸಿ ಓದಿಸುವುದು ಹಿರೇಮನೆ ಪದ್ಧತಿಯಾಗಿದೆ ಅದನ್ನು ಜಾರಿಗೆ ತನ್ನಿ ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಜಿ.ಪಂ. ಉಪ ಕಾರ್ಯದರ್ಶಿ ಮಲ್ಲಿಕಾರ್ಜುನ ತೊದಲಬಾಗಿ ತಿಳಿಸಿದರು.

ಜೆಸ್ಕಾಂ ಎಸ್.ಒಗೆ ನೋಟಿಸ್ : ಗ್ರಾಮ ಪಂಚಾಯಿತಿಗಳಿಗೆ ವಿದ್ಯುತ್ ಪರಿವರ್ತಕ ಬೇಕಾದಾಗ ಜೆಸ್ಕಾಂ ಅಧಿಕಾರಿಗಳು ತಮ್ಮ ಇಲಾಖೆ ವಾಹನದಿಂದಲೇ ಯಾವುದೇ ಬಾಡಿಗೆ ಪಡೆಯದೇ ಉಚಿತವಾಗಿ 48 ಗಂಟೆಯೊಳಗೆ ವಿದ್ಯುತ್ ವರಿವರ್ತಕಗಳನ್ನು ತಂದು ಕೂಡಿಸಬೇಕು ಎಂಬ ನಿಯಮವಿದೆ. ಆದರೆ, ಹನುಮಸಾಗರ ಹೋಬಳಿಯ ಜೆಸ್ಕಾಂ ಎಸ್.ಒ ವಿದ್ಯುತ್ ಪರಿವರ್ತಕ ತಂದು ಅಳವಡಿಸಲು ವಾಹನ ಬಾಡಿಗೆ ಭರಿಸುವಂತೆ ಸುಮಾರು ₹9 ಸಾವಿರ ಬಿಲ್ ನೀಡಿದ್ದಾರೆ ಎಂದು ಪಿಡಿಒ ಶಿವಪುತ್ರಪ್ಪ ಬರದೆಲಿ ಸಭೆಯ ಗಮನಕ್ಕೆ ತಂದರು. ಜೆಸ್ಕಾಂ ಎಇಇ ಅವರನ್ನು ತರಾಟೆಗೆ ತೆಗೆದುಕೊಂಡ ಜಿ.ಪಂ. ಉಪಕಾರ್ಯದರ್ಶಿ ಮಲ್ಲಪ್ಪ ತೊದಲಬಾಗಿ, ಕೂಡಲೇ ಹನುಮಸಾಗರ ಎಸ್.ಒಗೆ ನೋಟಿಸ್ ಜಾರಿ ಮಾಡುವಂತೆ ಸೂಚಿಸಿದರು. 

ವಾಣಿಜ್ಯ ಮಳಿಗೆ ಟೆಂಡರ್ : 2015-16ನೇ ಸಾಲಿನಲ್ಲಿ ಕರಾರು ಪತ್ರಗಳ ಮೂಲಕ ಹಂಚಿಕೆಯಾದ  ತಾಲೂಕು ಪಂಚಾಯಿತಿಯ ಒಟ್ಟು 55 ವಾಣಿಜ್ಯ ಮಳಿಗೆಗಳು 2022 ಕ್ಕೆ ಕರಾರು ಪತ್ರದ ಅವಧಿ ಮುಗಿದಿದೆ. ಚುನಾವಣೆ ಹಿನ್ನೆಲೆ ಮರು ಟೆಂಡರ್  ಕರೆಯದೆ ಬಿಡಲಾಗಿತ್ತು. ಸಧ್ಯ ಎಲ್ಲಾ ಮಳಿಗೆಗಳ ಮಾರುಕಟ್ಟೆ ಮೌಲ್ಯ ಪಡೆಯಲಾಗಿದೆ. 10 ಮಳಿಗೆದಾರರು ಕಟ್ ಬಾಕಿದಾರರಾಗಿದ್ದು, ಬಾಡಿಗೆ ವಸೂಲಿಗೆ ಕಾನೂನು ಕ್ರಮ ಕೈಗೊಳ್ಳಲಾಗಿದೆ. ಶೀಘ್ರದಲ್ಲೇ ಇನ್ನುಳಿದ 45 ಮಳಿಗೆಗಳನ್ನು ಬಹಿರಂಗ ಹರಾಜು ಪ್ರಕ್ರಿಯೆ ನಡೆಸಲಾಗುತ್ತದೆ ಎಂದು ತಾಪಂ ಅಧಿಕಾರಿಗಳು ಜಿ.ಪಂ ಉಪ ಕಾರ್ಯದರ್ಶಿಗಳಿಗೆ ತಿಳಿಸಿದರು.

ಸಭೆಯಲ್ಲಿ ಸಾರಿಗೆ, ಅರಣ್ಯ, ಕೃಷಿ, ಆರೋಗ್ಯ, ಅಬಕಾರಿ, ಬಿಸಿಎಂ, ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ, ಪ.ಪಂಚಾಯತ ಸೇರಿದಂತೆ ತಾಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ತಮ್ಮ ತಮ್ಮ ಇಲಾಖೆಯ ಪ್ರಗತಿ ವರದಿ ಸಲ್ಲಿಸಿದರು. ತಾಲೂಕು ಪಂಚಾಯಿತಿ ಇಒ ನಿಂಗಪ್ಪ ಮಸಳಿ, ಗ್ರೇಡ್-2 ತಹಸೀಲ್ದಾರ್ ಮುರಳೀಧರ ಮುಕ್ತೇದಾರ ಸೇರಿದಂತೆ ತಾಪಂ ಅಧಿಕಾರಿಗಳು ಉಪಸ್ಥಿತರಿದ್ದರು.