ಕುಷ್ಟಗಿ | ಕಾಂಗ್ರೆಸ್ ಸರ್ಕಾರ ವಿರುದ್ಧ ಬಿಜೆಪಿ ಮಾನವ ಸರಪಳಿ, ಆಕ್ರೋಶ

ಸಂಗಮೇಶ ಮುಶಿಗೇರಿ

ಕೃಷಿಪ್ರಿಯ ನ್ಯೂಸ್ |

ಕುಷ್ಟಗಿ : ಪೆಟ್ರೋಲ್ ಮತ್ತು ಡೀಸೆಲ್ ದರ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆ ಕ್ರಮ ಖಂಡಿಸಿ ಬಿಜೆಪಿ ಮಂಡಲ ಕಾರ್ಯಕರ್ತರು ಪಟ್ಟಣದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.

ಇಲ್ಲಿನ ಮಾರುತಿ ವೃತ್ತದಿಂದ ಕಾಲ ಜಾಥಾ ಹೊರಟದಲ್ಲಿ ಸಾಗಿದ ಬಿಜೆಪಿ ಮುಖಂಡರು, ಕಾರ್ಯಕರ್ತರು ಬಸವೇಶ್ವರ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿದರು. ರಾಜ್ಯ ಕಾಂಗ್ರೆಸ್ ಸರ್ಕಾರ ಹಾಗೂ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆಶಿ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ಹೊರಹಾಕಿದರು.

ಬಿಜೆಪಿ ಶಾಸಕ ಹಾಗೂ ವಿಧಾನಸಭಾ ಪ್ರತಿಪಕ್ಷದ ಮುಖ್ಯ ಸಚೇತಕ ದೊಡ್ಡನಗೌಡ ಎಚ್.ಪಾಟೀಲ್ ಮಾತನಾಡಿ, ನಾವ್ಯಾರೂ ಗ್ಯಾರಂಟಿ ಯೋಜನೆಗಳ ವಿರೋಧಿಗಳಲ್ಲ. ಆದರೆ, ಗ್ಯಾರಂಟಿ ಯೋಜನೆಗಳಿಗೆ ಹಣ ಸರಿದೂಗಿಸಲು ಆಗದೇ ರಾಜ್ಯದ ಕಾಂಗ್ರೆಸ್ ಸರ್ಕಾರ’ ಪೆಟ್ರೋಲ್, ಡೀಸೆಲ್, ಸ್ಟ್ಯಾಂಪ್ ಡ್ಯೂಟಿ ಮತ್ತು ನೋಂದಣಿ ಶುಲ್ಕ, ಅಬಕಾರಿ, ದಿನ ಬಳಕೆ ವಸ್ತುಗಳ ಬೆಲೆ ಏರಿಕೆ ಮಾಡುತ್ತಿದೆ. ಜನರಿಗೆ ತೀವ್ರ ಹೊರೆಯಾಗುತ್ತಿದೆ. ಒಬ್ಬರಿಂದ ಹಣ ಕಿತ್ತು ಮತ್ತೊಬ್ಬರಿಗೆ ಗ್ಯಾರಂಟಿ ಯೋಜನೆಯಲ್ಲಿ ನೀಡುತ್ತಿರುವ ಕ್ರಮ ಖಂಡನೀಯವಾಗಿದ್ದು, ಈ ಸರ್ಕಾರ ಇರಬೇಕಾ ಎಂಬ ಪ್ರಶ್ನೆ ಎಲ್ಲರಿಗೂ ಎದುರಾಗುತ್ತಿದೆ ಎಂದರು.

ಹಿಂದೆ ಬಿಜೆಪಿ ಸರ್ಕಾರ ಇದ್ದ ಸಂದರ್ಭದಲ್ಲಿ ಬೆಲೆ ಏರಿಕೆ ಮಾಡಿದಾಗ ಆಗ ಇದೇ ಕಾಂಗ್ರೆಸ್ ಹಾದಿ-ಬೀದಿ ರಂಪಾಟ ಮಾಡಿತು. ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ಅಭಿವೃದ್ಧಿ, ಬಡವರ ಅಭಿವೃದ್ಧಿ ಕೆಲಸ ಆಗುತ್ತಿಲ್ಲ. ಗ್ಯಾರಂಟಿಗಳನ್ನು ನಿಲ್ಲಿಸಿದರೆ ಸಾರ್ವಜನಿಕರಿಂದ ಆಕ್ರೋಶಕ್ಕೆ ಕಾರಣವಾಗುತ್ತದೆ ಎಂದು ಅರಿತ ಸಿದ್ದರಾಮಯ್ಯ ಸರ್ಕಾರ, ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಸುಮಾರು 180 ಸಾವಿರ ಕೋಟಿಗಳ ಭ್ರಷ್ಟಾಚಾರ ಮಾಡಿದ್ದಾರೆ. ಮಂತ್ರಿಗಳು ರಾಜಿನಾಮೆ ನೀಡಿದ್ದರೆ ಸಾಲದು ಮುಂದಿನ ದಿನಮಾನಗಳಲ್ಲಿ ಮುಖ್ಯಮಂತ್ರಿಗಳು ಸಹಿತ ರಾಜಿನಾಮೆ ಕೊಡಬೇಕಾದಂತ ಸಂದರ್ಭ ಬರುತ್ತದೆ ಎಂದು ಎಚ್ಚರಿಕೆ ಗಂಟೆ ಕೊಡಬಯಸುತ್ತೇನೆ ಎಂದ ಶಾಸಕ ದೊಡ್ಡನಗೌಡ ಪಾಟೀಲ್, ನುಡಿದಂತೆ ನಡೆಯುವ ಸರ್ಕಾರ ಆಗಿದ್ದರೆ ಕೂಡಲೇ ಏರಿಸಿದ ಪೆಟ್ರೋಲ್, ಡಿಸೇಲ್ ಬೆಲೆಯನ್ನು ಹಿಪಡೆಯಬೇಕು ಎಂದು ಆಗ್ರಹಿಸಿದರು.

ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಕೆ.ಮಹೇಶ, ಮಂಡಲ ಅಧ್ಯಕ್ಷ ಮಹಾಂತೇಶ ಬದಾಮಿ, ಯುವ ಮೋರ್ಚಾ ಅಧ್ಯಕ್ಷ ಉಮೇಶ ಯಾದವ ಸೇರಿದಂತೆ ಇತರರು ಮಾತನಾಡಿದರು. ಮಹಿಳಾ ಮಂಡಲ ಅಧ್ಯಕ್ಷೆ ಶೈಲಜಾ ಬಾಗಲಿ, ಪ್ರಮುಖರಾದ ರವಿಕುಮಾರ್ ಹಿರೇಮಠ, ಸುಬಾನಸಾಬ ಗೋನಾಳ, ಅಶೋಕ ಬಳೂಟಗಿ, ಜಿ.ಕೆ.ಹಿರೇಮಠ, ಅಮೀನುದ್ದೀನ್ ಮುಲ್ಲಾ, ಪಾಂಡುರಂಗ ಆಶ್ರೀತ್ ಇತರರು ಭಾಗವಹಿಸಿದ್ದರು.

  • ಬಸವೇಶ್ವರ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಅರ್ಧಗಂಟೆ ಹೆಚ್ಚು ಕಾಲ ರಸ್ತೆ ತಡೆ ನಡೆಸಲಾಯಿತು. ಕೇಂದ್ರೀಯ ಬಸ್ ನಿಲ್ದಾಣ ವರೆಗೂ ಹಾಗೂ ಅಂಬೇಡ್ಕರ್ ವೃತ್ತದ ವರೆಗೂ ಟ್ರಾಫಿಕ್ ಸಮಸ್ಯೆ ಉದ್ಭವವಾಯಿತು. ಜನರು ಹಾಗೂ ವಾಹನಗಳ ನಿಯಂತ್ರಿಸುವಲ್ಲಿ ಪೊಲೀಸರು ಹರಸಾಹಸ ಪಟ್ಟರು. ಜನ ತಾಳ್ಮೆ ಕಳೆದುಕೊಳ್ಳುವುದನ್ನು ಅರಿತು ಬೆಲೆ ಏರಿಕೆ ಕುರಿತು ಬರೆದ ಮನವಿ ಪತ್ರವನ್ನು ತಹಸೀಲ್ದಾರ್’ಗೆ ಸಲ್ಲಿಸಿ ಪ್ರತಿಭಟನೆ ಮುಕ್ತಾಯಗೊಳಿಸಿದರು.