ಕೃಷಿಪ್ರಿಯ ನ್ಯೂಸ್ |
ಕುಷ್ಟಗಿ : ಪಟ್ಟಣದ ಇಂದಿರಾ ಕಾಲೋನಿ ನಿವಾಸಿ ವೀರಶೈವ ಲಿಂಗಾಯತ ಸಮಾಜದ ಹಿರಿಯ ಜೀವಿ ಕೆಪಿಟಿಸಿಎಲ್ ನಿವೃತ್ತ ಅಧಿಕಾರಿ ಅಮರಪ್ಪ ತಂ. ಶರಣಪ್ಪ ಇಳಕಲ್ (74) ಅವರು ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ.
ಶನಿವಾರ ಬೆಳಿಗ್ಗೆ ಸ್ವಗೃಹದಲ್ಲಿ ನಿಧನರಾಗಿದ್ದು, ಪತ್ನಿ, ಒರ್ವ ಪುತ್ರ, ಇಬ್ಬರು ಪುತ್ರಿಯರು ಸೇರಿದಂತೆ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ಮೂಲತಃ ಲಿಂಗಸೂರು ತಾಲೂಕಿನ ಸಜ್ಜಲಗುಡ್ಡದವರಾಗಿದ್ದು, ಕುಷ್ಟಗಿ ಪಟ್ಟಣ ಮತ್ತು ಸಜ್ಜಲಗುಡ್ಡದಲ್ಲಿ ಪ್ರೌಢಶಾಲೆ ಶಿಕ್ಷಕರಾಗಿ ಹಾಗೂ ಆರೋಗ್ಯ ಇಲಾಖೆಯಲ್ಲಿ ಕೆಲ ವರ್ಷಗಳ ಸೇವೆ ಸಲ್ಲಿಸಿದ್ದರು. ಬಳಿಕ ಕೆಪಿಟಿಸಿಎಲ್’ನಲ್ಲಿ ಲೆಕ್ಕಾಧಿಕಾರಿಯಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ್ದರು. ಬಹಳ ವರ್ಷಗಳಿಂದ ಕುಷ್ಟಗಿ ಪಟ್ಟಣದಲ್ಲಿ ನೆಲೆಯೂರಿದ್ದ ಅಮರಪ್ಪ ಅವರು ಮರಣ ನಂತರ ತಮ್ಮ ದೇಹವನ್ನು ಕೊಪ್ಪಳದ ಶ್ರೀಗವಿಸಿದ್ದೇಶ್ವರ ಆಯುರ್ವೇದಿಕ್ ಮೆಡಿಕಲ್ ಕಾಲೇಜಿಗೆ ದಾನ ಮಾಡುವ ಇಚ್ಛೆ ಹೊಂದಿದ್ದರು.
ಮೃತರ ಇಚ್ಛೆಯಂತೆ ಕುಟುಂಬದವರು, ಪಾರ್ಥಿವ ಶರೀರವನ್ನು ಸ್ವಗೃಹದಲ್ಲಿ ಬೆಳಿಗ್ಗೆ 11 ಗಂಟೆಯ ವರೆಗೂ ಸಾರ್ವಜನಿಕ ದರ್ಶನಕ್ಕಾಗಿ ಇರಿಸಿದ್ದರು. ನಂತರ ಕೊಪ್ಪಳದ ಗವಿಸಿದ್ದೇಶ್ವರ ಮೆಡಿಕಲ್ ಕಾಲೇಜಿಗೆ ಹಸ್ತಾಂತರಿಸಿದರು ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಮೃತ ಅಮರಪ್ಪ ಅವರಿಗೆ ಕೆಪಿಟಿಸಿಎಲ್ ನೌಕರರು, ಶಿಷ್ಯ ಬಳಗ ಹಾಗೂ ಪಟ್ಟಣದ ಜನತೆ ಕಂಬನಿ ಮಿಡಿದಿದ್ದಾರೆ.