ಕುಷ್ಟಗಿ | ಶಾದಿಮಹಲ್ ನೂತನ ಕಟ್ಟಡಕ್ಕೆ ಅನುದಾನ: ಸಚಿವ ಜಮೀರ್ ಅಹ್ಮದ್ ಭರವಸೆ

ಕೃಷಿಪ್ರಿಯ :

ಸುದ್ದಿ ಸಮರ್ಪಣ |

ಕುಷ್ಟಗಿ : ಪಟ್ಟಣದಲ್ಲಿ ನೂತನ ಶಾದಿಮಹಲ್ ಕಟ್ಟಡ ನಿರ್ಮಿಸಲು ರಾಜ್ಯ ಸರ್ಕಾರದಿಂದ ಅಗತ್ಯ ಅನುದಾನ ನೀಡಲಾಗುವುದು ಎಂದು ರಾಜ್ಯ ವಕ್ಫ್, ಅಲ್ಪಸಂಖ್ಯಾತರ ಕಲ್ಯಾಣ ಹಾಗೂ ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಅವರು ಭರವಸೆ ನೀಡಿದರು.

ಶನಿವಾರ, ಹೊಸಪೇಟೆಯಿಂದ ಪಟ್ಟಣದ ಮೂಲಕ ಕಲಬುರ್ಗಿ ನಗರ ಕಡೆಗೆ ಪ್ರಯಾಣ ಬೆಳೆಸುತ್ತಿರುವ ಮಧ್ಯೆ ಸ್ಥಳೀಯ ಕಾಂಗ್ರೆಸ್ ಅಲ್ಪಸಂಖ್ಯಾತ ಯುವ ಮುಖಂಡರು, ಕಾರ್ಯಕರ್ತರಿಂದ ಸನ್ಮಾನ ಹಾಗೂ ಮನವಿಯನ್ನು ಸ್ವೀಕರಿಸಿ ಮಾತನಾಡಿದರು.

ಪಟ್ಟಣದ ಶಾದಿಮಹಲ್ ಕಟ್ಟಡ ಅವೈಜ್ಞಾನಿಕದಿಂದ ಕೂಡಿದ್ದು, ಇತ್ತೀಚಿನ ವರ್ಷಗಳಲ್ಲಿ ಮಳೆಯಿಂದಾಗಿ ಸಂಪೂರ್ಣ ನೀರುಪಾಲಾಗಿ ನಿರುಪಯುಕ್ತವಾಗಿದೆ. ಇದರಿಂದ ಸ್ಥಳೀಯ ಬಡ ಮುಸ್ಲಿಮರು ಶಾದಿ ಮತ್ತಿತರ ಸಭೆ, ಸಮಾರಂಭಗಳು ನಡೆಸಲು ತೀವ್ರ ತೊಂದರೆಯಾಗಿದೆ. ಹೀಗಾಗಿ ರಾಜ್ಯ ಸರ್ಕಾರದಿಂದ ನಿರುಪಯುಕ್ತ ಶಾದಿಮಹಲ್ ಕಟ್ಟಡವನ್ನು ತೆರವುಗೊಳಿಸಿ ಅದೇ ಜಾಗದಲ್ಲಿ ಸುಸಜ್ಜಿತವಾದ ನೂತನ ಶಾದಿಮಹಲ್ ಕಟ್ಟಡ ನಿರ್ಮಿಸಲು ಅನುದಾನ ಮಂಜೂರು ಮಾಡಬೇಕೆಂದು ಸ್ಥಳೀಯ ಮುಸ್ಲಿಂ ಸಮಾಜದ ಮುಖಂಡ ಹಾಗೂ ಕಾಂಗ್ರೆಸ್ ಕೊಪ್ಪಳ ಜಿಲ್ಲಾ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಸೈಯದ್ ಮೈನುದ್ದೀನ್ ಮುಲ್ಲಾ ಅವರು ಸಚಿವರಲ್ಲಿ ಮನವಿ ಮಾಡಿದರು.

2 ಕೋಟಿ ರೂ. ಅನುದಾನ: ನಿರುಪಯುಕ್ತ ಶಾದಿಮಹಲ್ ಕಟ್ಟಡ ತೆರವುಗೊಳಿಸಿ ಅದೇ ಜಾಗದಲ್ಲಿ ನೂತನ ಕಟ್ಟಡ ನಿರ್ಮಿಸಿಕೊಡಲು ರಾಜ್ಯ ಸರ್ಕಾರ ಅನುದಾನ ನೀಡಲು ಬದ್ಧವಿದೆ. ತಾವು ಕೂಡಲೇ ನೂತನ ಶಾದಿಮಹಲ್ ಕಟ್ಟಡದ ನೀಲನಕ್ಷೆ ಹಾಗೂ ಅಂದಾಜು ವೆಚ್ಚ ದಾಖಲೆಗಳೊಂದಿಗೆ ಜಿಲ್ಲಾ ವಕ್ಫ್ ಬೋರ್ಡ್ ಮೂವಕ ಪ್ರಸ್ತಾವನೆ ಸಲ್ಲಿಸಿದರೆ ಕೂಡಲೇ ಸರ್ಕಾರದಿಂದ ಕಟ್ಟಡ ಆರಂಭಕ್ಕೆ ಮೊದಲು 1 ಕೋಟಿ ರೂ. ಅನುದಾನ ನೀಡಲಾಗುವುದು. ಬಳಿಕ ಅಗತ್ಯ ಬಿದ್ದರೆ ಮತ್ತೊಂದು ಕೋಟಿ ರೂ. ಅನುದಾನ ಒದಗಿಸಲಾಗುವುದು ಎಂದು ಸಚಿವ ಜಮೀರ್ ಅಹ್ಮದ್ ಖಾನ್ ಅವರು ಭರವಸೆ ನೀಡಿದರು.

200 ಮನೆ ಮಂಜೂರು: ಕುಷ್ಟಗಿ ಪಟ್ಟಣದಲ್ಲಿ ಸಾಕಷ್ಟು ಜನ ಕಡು ಬಡವರಿಗೆ ಸ್ವಂತ ಮನೆ ಇಲ್ಲ. ಆದರೆ, ನಮ್ಮ ಮನೆ ಯೋಜನೆಯಡಿ ಹಲವು ಬಡವರು ಅರ್ಜಿ ಸಲ್ಲಿಸಿದ್ದರು. ಆದರೆ, ಮನೆ ನಿರ್ಮಾಣಕ್ಕೆ ಅಗತ್ಯ ಅನುದಾನ ಬಿಡುಗಡೆಯಾಗಲಿಲ್ಲ. ಹೀಗಾಗಿ ವಸತಿ ಯೋಜನೆಯಡಿ ಮನೆಗಳ ನಿರ್ಮಾಣಕ್ಕೆ ಅನುದಾನ ನೀಡಬೇಕು ಎಂದ ಸ್ಥಳೀಯ ಕಾಂಗ್ರೆಸ್ ಮುಂಖಡರ ಮನವಿಗೆ ಪ್ರತಿಕ್ರಿಯೆ ನೀಡಿದ ಸಚಿವ ಜಮೀರ್ ಅಹ್ಮದ್ ಖಾನ್ ಅವರು, ಸ್ಥಳೀಯ ಪುರಸಭೆ ವತಿಯಿಂದ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದರೆ 200 ಮನೆ ಮಂಜೂರು ಮಾಡಿ ನಿರ್ಮಾಣಕ್ಕೆ ಅನುದಾನ ನೀಡಲಾಗುವುದು ಎಂದು ಭರವಸೆ ನೀಡಿದರು.

ಈ ವೇಳೆ ರಾಜ್ಯ ವಕ್ಫ್ ಬೋರ್ಡ್ ಅಧ್ಯಕ್ಷ ಅಹ್ಮದ್ ಪಾಷಾ, ಕೊಪ್ಪಳ ನಗರಸಭೆ ಮಾಜಿ ಅಧ್ಯಕ್ಷ ಅಹ್ಮದ್ ಪಟೇಲ್, ಕಾಂಗ್ರೆಸ್ ಸ್ಥಳೀಯ ಮುಖಂಡ ಉಮೇಶ್ ಮಂಗಳೂರು, ಹುಸೇನ್ ಕಾಯಗಡ್ಡಿ, ರಾಜು ಗುಮಗೇರಿ ಇತರರು ಇದ್ದರು.