ಕೃಷಿಪ್ರಿಯ..
ಸುದ್ದಿ ಸಮರ್ಪಣ |
ಕೊಪ್ಪಳ : ಗದಗಿನ ವೀರೇಶ್ವರ ಪುಣ್ಯಾಶ್ರಮದಲ್ಲಿ ಶನಿವಾರ ಕಲ್ಲಯ್ಯ ಅಜ್ಜನವರಿಂದ ಬಿಡುಗಡೆಯಾದ ‘ಶಿವಯೋಗಿ ಸಂತ ಪುಟ್ಟಯ್ಯಜ್ಜ’ ಧ್ವನಿಸುರುಳಿಯಲ್ಲಿ ಜಿಲ್ಲೆಯ ಕುಷ್ಟಗಿ ಪಟ್ಟಣದ ಸಂಗೀತ ಶಿಕ್ಷಕ, ಲಿಂ.ಪಂ.ಪುಟ್ಟರಾಜ ಗವಾಯಿಗಳ ಶಿಷ್ಯ ಹನುಮಂತ ಲಿಂಗನಬಂಡಿ ಅವರಿಂದ ಮೂಡಿಬಂದ ಹಾಡಿಗೆ ಜನ ಫಿದಾ ಆಗಿದ್ದಾರೆ.
‘ಸಂಗೀತ ಲೋಕವೇ ತಲೆಬಾಗಿದೆ ಪುಟ್ಟರಾಜನೆಂಬ ನಾಮ ಅಮರವಾಗಿದೆ..’ ಎಂಬ ಹಾಡಿಗೆ ಹನುಮಂತ ಲಿಂಗನಬಂಡಿ ಅವರು ಧ್ವನಿಯಾಗಿದ್ದಾರೆ. ಅವರ ಇಂಪಾದ ಹಾಡಿಗೆ ಸಂಗೀತಾಸಕ್ತರು ತಲೆಯಾಡಿಸುವ ಮೂಲಕ ಗುನುಗುನಿಸುತಿದ್ದಾರೆ.
ಮೂಲತಃ ಯಲಬುರ್ಗಾ ತಾಲೂಕಿನ ಲಿಂಗನಬಂಡಿ ಗ್ರಾಮದವರಾದ ಇವರು, ಕಳೆದೊಂದು ದಶಕದಿಂದ ಪಟ್ಟಣದ ಸಂತ ಶಿಶುನಾಳ ಷರೀಫ್ ನಗರದಲ್ಲಿ ವಾಸವಾಗಿ ಹಲವು ಮಕ್ಕಳಿಗೆ ಸಂಗೀತ ಶಿಕ್ಷಣ ಧಾರೆಯೆರೆಯುತ್ತಿದ್ದಾರೆ. ಅಲ್ಲದೆ ಉತ್ತರ ಕರ್ನಾಟಕದ ಅನೇಕ ಕಡೆ ಸಂಗೀತ ಸೇವೆ ಮೂಲಕ ಚಿರಪಚಿತರಾಗಿದ್ದಾರೆ. ಇವರ ಬಳಿ ಸಂಗೀತ ಕಲಿತ ಅನೇಕರು, ಸದ್ಯ ಉತ್ತಮ ಗಾಯಕರಾಗಿ ಹೊರಹೊಮ್ಮಿದ್ದಾರೆ. ಕೆಲವರು ಟಿವಿ ರಿಯಾಲಿಟಿ ಶೋ ಹಾಗೂ ಚಲನಚಿತ್ರಗಳಲ್ಲಿ ಹಾಡುವ ಅವಕಾಶ ಗಿಟ್ಟಿಸಿಕೊಂಡಿದ್ದಾರೆ.
ಎಷ್ಟೋ ಕವಿತೆಗಳಿಗೆ ಸ್ವರ ಸಂಯೋಜನೆ ಮಾಡಿರುವ ಹನುಮಂತ ಲಿಂಗನಬಂಡಿ ಅವರು, ಇದೇ ಪ್ರಥಮ ಬಾರಿಗೆ ಹಸಮಕಲ್’ನ ಬಸವಲಿಂಗಯ್ಯ ಸ್ವಾಮಿ ಹಿರೇಮಠ ಅವರ ಸ್ವರಚಿತ ಸಾಹಿತ್ಯ., ಬಳ್ಳಾರಿಯ ಕಲ್ಲೂರು ಡಾ. ದೊಡ್ಡಯ್ಯ ಗವಾಯಿಗಳವರ ನಿರ್ಮಾಪಕದಲ್ಲಿ ಮೂಡಿಬಂದ ‘ಶಿವಯೋಗಿ ಸಂತ ಪುಟ್ಟಯ್ಯಜ್ಜ’ ಧ್ವನಿಸುರುಳಿಯಲ್ಲಿ ‘ಸಂಗೀತ ಲೋಕವೇ ತಲೆಬಾಗಿದೆ ಪುಟ್ಟರಾಜನೆಂಬ ನಾಮ ಅಮರವಾಗಿದೆ’ ಎಂಬ ಹಾಡಿಗೆ ಧ್ವನಿ ನೀಡಿದ್ದಾರೆ. ಹನುಮಂತ ಲಿಂಗನಬಂಡಿ ಅವರ ಹಾಡಿಗೆ ಮೆಚ್ಚಿ ಹರ್ಷಿತರಾದ ಅವರ ಶಿಷ್ಯರು ಹಾಗೂ ಸಂಗೀತಾಸಕ್ತರು, ಹನುಮಂತ ಮೇಷ್ಟ್ರಗೆ ಗಾಯನ ರಂಗದಲ್ಲಿ ಇನ್ನೂ ಹೆಚ್ಚು ಅವಕಾಶಗಳು ಅರಿಸಿ ಬರಲಿ ಎಂದು ಹಾರೈಸಿದ್ದಾರೆ.