ಕುಷ್ಟಗಿ | ನಾಡೋಜ ಕಮಲಾ ಹಂಪನಾಗೆ ಕುಷ್ಟಗಿ ಕಸಾಪ ನುಡಿನಮನ

ಕೃಷಿಪ್ರಿಯ..
ಸುದ್ದಿ ಸಮರ್ಪಣ |


ಕುಷ್ಟಗಿ: ಇತ್ತೀಚೆಗೆ ನಿಧನರಾದ ಕನ್ನಡ ಸಾಹಿತ್ಯ ಲೋಕದ ಹಿರಿಯ ಸಾಹಿತಿ, ಸಂಶೋಧಕಿ, ನಾಡೋಜ ಕಮಲಾ ಹಂ.ಪ.ನಾಗರಾಜಯ್ಯ ಅವರಿಗೆ ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕದಿಂದ ನುಡಿನಮನ ಸಲ್ಲಿಸಲಾಯಿತು.

ಪಟ್ಟಣದ ಬಸವ ಭವನದಲ್ಲಿ ಸಮಾವೇಶಗೊಂಡ ಪರಿಷತ್ತಿನ ಪದಾಧಿಕಾರಿಗಳು ಹಾಗೂ ಸಾಹಿತ್ಯಾಸಕ್ತರು ದಿ.ಕಮಲಾ ಹಂಪನಾ ಅವರ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡಿ ಗೌರವ ಸಲ್ಲಿಸಿದರು.

ಬಳಿಕ ತಾಲೂಕು ಘಟಕದ ಅಧ್ಯಕ್ಷ ವೀರೇಶ ಬಂಗಾರಶೆಟ್ಟರ್ ಮಾತನಾಡಿ, ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಕಮಲಾ ಹಂಪನಾ ಅವರ ಸೇವೆ ಸ್ಮರಣೀಯ. ಅವರು ಸುಮಾರು 48 ಕೃತಿಗಳನ್ನು ರಚಿಸಿದ್ದು, ಮೂಡಬಿದಿರೆಯಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು. ಅವರ ಸಾಹಿತ್ಯ ಸೇವೆಗೆ ನಾಡೋಜ ಸೇರಿದಂತೆ ಹಲವು ಪ್ರಶಸ್ತಿ ಗೌರವಗಳು ಅರಸಿ ಬಂದಿವೆ. ನಾಡೋಜ ಕಮಲಾ ಹಾಗೂ ಅವರ ಪತಿ ಹಂ.ಪ.ನಾಗರಾಜಯ್ಯ ಅವರು ಸಾಹಿತ್ಯ ಕ್ಷೇತ್ರದ ಅಪೂರ್ವ ದಂಪತಿ ಎಂದು ಕರೆಯಲಾಗುತ್ತಿತ್ತು. ಅಲದೇ ಕನ್ನಡಪರ ಹೋರಾಟ ವೇಳೆಯಲ್ಲೂ ಕಮಲಾ ದಂಪತಿ ಮುಂಚೂಣಿಯಾಗಿರುತ್ತಿದ್ದರು. ಕಮಲಾ ಹಂಪನಾ ಅವರ ನಿಧನ ಕನ್ನಡ ಸಾರಸ್ವತ ಲೋಕಕ್ಕೆ ತುಂಬಲಾರದ ನಷ್ಟ ಎಂದರು. ನಿವೃತ್ತ ಅಧಿಕಾರಿ ಹ.ಯ.ಈಟಿಯವರ ಅವರು ನಾಡೋಜ ಕಮಲಾ ಹಂ.ಪ.ನಾ. ಅವರ ಕವನ ವಾಚನ ಮೂಲಕ ನುಡಿನಮನ ಸಲ್ಲಿಸಿದರು.

ಈ ವೇಳೆ ಶರಣ ಸಾಹಿತ್ಯ ಪರಿಷತ್ತಿನ ತಾಲೂಕು ಘಟಕ ಅಧ್ಯಕ್ಷ, ಶಿಕ್ಷಕ ನಟರಾಜ ಸೋನಾರ, ಸಾಹಿತ್ಯಾಸಕ್ತರಾದ ರವೀಂದ್ರ ಬಾಕಳೆ, ಭರತೇಶ ಜೋಷಿ, ಮಹಾಂತೇಶ ಮಂಗಳೂರು, ರವಿ ಮಾಟೂರ, ವೀರಯ್ಯ ಕಾಡಗಿಮಠ, ಶ್ರೀನಿವಾಸ ಕಂಟ್ಲಿ, ಬಾಬು ಘೋರ್ಪಡೆ, ಕಲಾವಿದ ಕೆ. ಹುಸ್ಸೇನಸಾಬ, ಕಸಾಪ ಕಾರ್ಯದರ್ಶಿ ಮಹೇಶ ಹಡಪದ ಇತರರಿದ್ದರು.