ಕುಷ್ಟಗಿ | ಮಾದಕ ದ್ರವ್ಯ ವಿರೋಧಿ ದಿನ – ಪೊಲೀಸ್ ಇಲಾಖೆ ಜಾಗೃತಿ

ಕೃಷಿಪ್ರಿಯ..
ಸುದ್ದಿ ಸಮರ್ಪಣ |

ಕುಷ್ಟಗಿ : ಪಟ್ಟಣ ಸೇರಿದಂತೆ ತಾಲೂಕಿನ ಶಾಲಾ-ಕಾಲೇಜುಗಳಲ್ಲಿ ಪೊಲೀಸ್ ಇಲಾಖೆ ವತಿಯಿಂದ ಬುಧವಾರ ಅಂತರರಾಷ್ಟ್ರೀಯ ಮಾದಕ ದ್ರವ್ಯ ವಿರೋಧಿ ದಿನಾಚರಣೆ ನಡೆಯಿತು.

ಪಟ್ಟಣದ ಆರಕ್ಷಕ ವೃತ್ತ ನಿರೀಕ್ಷಕರ ಕಾರ್ಯಾಲಯದ ಆವರಣದಲ್ಲಿ ಬೆಳಿಗ್ಗೆ ಮಾದಕ ದ್ರವ್ಯ ವಿರೋಧಿ ದಿನಾಚರಣೆಗೆ ಸಿಪಿಐ ಯಶವಂತ ಬಿಸನಳ್ಳಿ ಅವರು ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು, ಉತ್ತಮ ನಾಗರಿಕರಾಗಲು ಮಕ್ಕಳು ಒಳ್ಳೆಯ ಹವ್ಯಾಸಗಳನ್ನು ಬೆಳೆಸಿಕೊಳ್ಳಬೇಕು. ಆರೋಗ್ಯದ ಮೇಲೆ ಪರಿಣಾಮ ಬೀರುವಂತಹ ವಸ್ತುಗಳಿಗೆ ದಾಸರಾಗಬಾರದು. ಮಾದಕ ದ್ರವ್ಯ ವ್ಯಸನಿಗಳಾದರೆ ವೈಯಕ್ತಿಕ ಹಾಗೂ ಸಮಾಜದ ಮೇಲೆ ಕೆಟ್ಟ ಪರಿಣಾಮ ಉಂಟಾಗುತ್ತದೆ. ಇದನ್ನು ವಿದ್ಯಾರ್ಥಿಗಳು ಅರಿತುಕೊಂಡು ಮಾದಕ ದ್ರವ್ಯ ಸೇವನೆ ಮಾಡದಂತೆ ಜನರಲ್ಲಿ ತಿಳಿವಳಿಕೆ ಮೂಡಿಸಬೇಕು ಎಂದು ತಿಳಿಸಿದರು.

ಬಳಿಕ ಮಾದಕ ದ್ರವ್ಯ ವಿರುದ್ಧವಾಗಿ ವಿದ್ಯಾರ್ಥಿಗಳಲ್ಲಿ ಪ್ರತಿಜ್ಞೆ ಮಾಡಿಸಿದರು. ಈ ವೇಳೆ ಪಿಎಸ್’ಐ ಮುದ್ದುರಂಗಸ್ವಾಮಿ, ಕ್ರೈಂ ಪಿಎಸ್’ಐ ಮಾನಪ್ಪ ವಾಲ್ಮೀಕಿ ಸೇರಿದಂತೆ ಇಲಾಖೆ ಸಿಬ್ಬಂದಿ ವರ್ಗ ಇದ್ದರು.

ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮಹಾವಿದ್ಯಾಲಯದ ಕುವೆಂಪು ಸಭಾಂಗಣದಲ್ಲಿ ಅಂತರರಾಷ್ಟ್ರೀಯ ಮಾದಕ ದ್ರವ್ಯ ವಿರೋಧಿ ದಿನಾಚರಣೆಯನ್ನು ಆಚರಿಸಲಾಯಿತು.
ಈ ವೇಳೆ ಪಿಎಸ್’ಐ ಮುದ್ದುರಂಗಸ್ವಾಮಿ, ಕ್ರೈಂ ಪಿಎಸ್’ಐ ಮಾನಪ್ಪ ವಾಲ್ಮೀಕಿ ಅವರು, ಮಾದಕ ದ್ರವ್ಯ ವ್ಯಸನಗಳಿಂದ ವಯಕ್ತಿಕ ಹಾಗೂ ಸಮಾಜದ ಸ್ವಾಸ್ಥ್ಯದ ಮೇಲಾಗುವ ದುಷ್ಪರಿಣಾಮಗಳ ಕುರಿತು ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಿದರು.

ಬಳಿಕ ಮಾದಕ ದ್ರವ್ಯ ವಿರುದ್ಧವಾಗಿ ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಪ್ರಾಂಶುಪಾಲ ಡಾ.ಎಸ್. ವಿ. ಡಾಣಿ ಸೇರಿದಂತೆ ಉಪನ್ಯಾಸಕ ವೃಂದ ಹಾಗೂ ಸಿಬ್ಬಂದಿ ವರ್ಗ ಇದ್ದರು.

ಅದೇರೀತಿ ತಾಲೂಕಿನ ಹನುಮನಾಳ ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಮಾದಕ ದ್ರವ್ಯ ವಿರೋಧಿ ದಿನವನ್ನು ವಿದ್ಯಾರ್ಥಿಗಳೊಂದಿಗೆ ಆಚರಿಸಲಾಯಿತು.
ಹನುಮಸಾಗರ ಕ್ರೈಂ ಪಿಎಸ್’ಐ ಬಸಪ್ಪ ಲಮಾಣಿ ಅವರು ಮಾದಕ ದ್ರವ್ಯ ಸೇವಿಸುವುದು ಮತ್ತು ಮಾರಾಟ ಮಾಡುವುದು ಕಾನೂನು ಬಾಹಿರವಾಗಿದೆ. ಈ ಕುರಿತು ವಿದ್ಯಾರ್ಥಿಗಳು ಜಾಗೃತರಾಗಬೇಕು ಎಂದರು. ಬಳಿಕ ಪ್ರತಿಜ್ಞಾವಿಧಿ ಬೋಧಿಸಿದರು. ಈ ವೇಳೆ ಕಾಲೇಜು ಪ್ರಾಂಶುಪಾಲರು, ಉಪನ್ಯಾಸಕರು, ಸಿಬ್ಬಂದಿ ವರ್ಗ ಮತ್ತು ಗ್ರಾಮಸ್ಥರು ಇದ್ದರು.