ಕೃಷಿಪ್ರಿಯ..
ಸುದ್ದಿ ಸಮರ್ಪಣ |
ಕೊಪ್ಪಳ: ಕಾರು ಚಲಾಯಿಸಿಕೊಂಡು ಪ್ರವಾಸಕ್ಕೆ ತೆರಳಿದ್ದ ವಿಜಯಪುರ ಜಿಲ್ಲೆಯ ನಾಲ್ವರು ಯುವಕರು ಪ್ರವಾಸ ಮುಗಿಸಿ ಮರಳಿ ಹಿಂತಿರುಗುತ್ತಿದ್ದ ಸಂದರ್ಭದಲ್ಲಿ ಕಾರು ಪಲ್ಟಿಯಾಗಿ ಓರ್ವ ಯುವಕ ಸಾವಿಗೀಡಾದ ಘಟನೆ ಜಿಲ್ಲೆಯ ಕುಷ್ಟಗಿ ರಾಷ್ಟ್ರೀಯ ಚತುಷ್ಪಥ ಹೆದ್ದಾರಿಯಲ್ಲಿ ಬುಧವಾರ ಬೆಳಿಗ್ಗೆ ಸಂಭವಿಸಿದೆ.
ಕುಷ್ಟಗಿ-ಇಳಕಲ್ ರಾಷ್ಟ್ರೀಯ ಚತುಷ್ಪಥ ಹೆದ್ದಾರಿ ಜಿಯೋ ಪೆಟ್ರೋಲ್ ಬಂಕ್ ಬಳಿ ಈ ದುರ್ಘಟನೆ ಸಂಭವಿಸಿದೆ. ಇಂಡಿ ತಾಲೂಕಿನ ದರ್ಶನ್ ತಂದೆ ಸತೀಶಕುಮಾರ ಪಾಂಡ್ರೆ (19) ಸಾವಿಗೀಡಾದ ಕಾರು ಚಲಾಯಿಸುತಿದ್ದ ಯುವಕ. ಧಾರವಾಡದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ವಿಜಯಪುರ ಜಿಲ್ಲೆಯ ನಾಲ್ವರು ಯುವಕರು, ಮೃತ ಯುವಕನ ಸಂಬಂಧಿಕರ ಕಾರು ತೆಗೆದುಕೊಂಡು ಪ್ರವಾಸಕ್ಕೆ ತೆರಳಿದ್ದರು. ಪ್ರವಾಸ ಮುಗಿಸಿಕೊಂಡು ಮರಳಿ ವಿಜಯಪುರಕ್ಕೆ ತೆರಳುತಿದ್ದ ಸಂದರ್ಭದಲ್ಲಿ ಅತಿವೇಗವಾಗಿದ್ದ ಕಾರು ಚಾಲಕನ ನಿಯಂತ್ರಣಕ್ಕೆ ಸಿಗದೆ ಡಿವೈಡರ್’ಗೆ ಡಿಕ್ಕಿ ಹೊಡಿದು ರಸ್ತೆ ಪಕ್ಕಕ್ಕೆ ಪಲ್ಟಿಯಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಅಭಿಷೇಕ ದಳವಾಯಿ (18), ವೀರೇಶ ಮಂದೇಲಿ (19), ಆದಿತ್ಯ ಬನಸೋಡೆ (18) ಎಂಬ ಮೂವರು ಗಾಯಗೊಂಡಿದ್ದಾರೆ. ಈ ಕುರಿತು ಕುಷ್ಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.