ಕುಷ್ಟಗಿ | ಪಟ್ಟಣ ಸೇರಿ ತಾಲೂಕಿನೆಲ್ಲೆಡೆ ನಾಡಪ್ರಭು ಕೆಂಪೇಗೌಡರ 515ನೇ ಜಯಂತಿ ಆಚರಣೆ

ಕೃಷಿಪ್ರಿಯ..
ಸುದ್ದಿ ಸಮರ್ಪಣ |


ಕುಷ್ಟಗಿ : ಪಟ್ಟಣ ಸೇರಿದಂತೆ ತಾಲೂಕಿನೆಲ್ಲಡೆ ಬೆಂಗಳೂರು ನಗರ ನಿರ್ಮಾತೃ ನಾಡಪ್ರಭು ಕೆಂಪೇಗೌಡರ 515ನೇ ಜಯಂತಿಯನ್ನು ಗುರುವಾರ ಆಚರಿಸಲಾಯಿತು.

ವಿವಿಧ ಸರ್ಕಾರಿ ಕಚೇರಿಗಳಲ್ಲಿ, ಶಾಲಾ-ಕಾಲೇಜುಗಳಲ್ಲಿ, ಗ್ರಾಮ ಪಂಚಾಯಿತಿ ಕಾರ್ಯಾಲಯಗಳು ಸೇರಿದಂತೆ ವಿವಿಧೆಡೆ ಹಲವು ಗಣ್ಯರು ನಾಡಪ್ರಭು ಕೆಂಪೇಗೌಡರ ಭಾವಚಿತ್ರ ಪೂಜಿಸಿ ಪುಷ್ಪಾರ್ಪಣೆ ಮಾಡಿ ಗೌರವಿಸಿದರು.

ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆಡಿಟೋರಿಯಂ ಹಾಲನಲ್ಲಿ ತಾಲ್ಲೂಕು ಆಡಳಿತದ ವತಿಯಿಂದ ನಡೆದ ನಾಡಪ್ರಭು ಕೆಂಪೇಗೌಡರ ಜಯಂತಿ ಕಾರ್ಯಕ್ರಮಕ್ಕೆ ಗ್ರೇಡ್-2 ತಹಸೀಲ್ದಾರ್ ಮುರಳೀಧರ ಮುಕ್ತೇದಾರ ಅವರು ಚಾಲನೆ ನೀಡಿದರು.

ಪ್ರಾಂಶುಪಾಲ ಡಾ.ಎಸ್.ವಿ. ಡಾಣಿ ಅವರು ಉಪನ್ಯಾಸ ನೀಡಿ, ನಾಡಪ್ರಭು ಕೆಂಪೇಗೌಡರು 14ನೇ ಶತಮಾನದಲ್ಲಿ ಬೆಂಗಳೂರು ನಗರವನ್ನು 21ನೇ ಶತಮಾನದಲ್ಲಿಯೂ ನೆನಪಿಸಿಕೊಳ್ಳುವಂತೆ ನಿರ್ಮಿಸಿದ್ದಾರೆ. ಅವರ ದೂರ ದೃಷ್ಠಿಯ ಕಲ್ಪನೆಗಳು ಮಹತ್ವವಾಗಿದ್ದು, ಸುಂದರ ನಗರ ನಿರ್ಮಾಣವಾಗಲು ವ್ಯಾವಹಾರಿಕ ಕೇಂದ್ರಗಳ ನಿರ್ಮಾಣ, ವಿವಿಧ ಕಸುಬುಗಳಿಗೆ ಪೂರಕವಾಗಿ ಮಾರುಕಟ್ಟೆ ನಿರ್ಮಾಣ, ಕೃಷಿಕರಿಗೆ ಆವಶ್ಯಕವಾದ ಸೌಲಭ್ಯಗಳು, ಕೆರೆ ಉದ್ಯಾನವನ, ದೇವಸ್ಥಾನಗಳ ಕಟ್ಟಿಸಿ ಬೆಂಗಳೂರನ್ನು ಸುಮದರವಾಗಿ ನಿರ್ಮಿಸಿಕೊಟ್ಟು ವಿಶ್ವಕ್ಕೇ ಮಾದರಿ ನಗರವಾಗಿಸಿದ್ದಾರೆ. ಇತಿಹಾಸದಲ್ಲಿ ಅಚ್ಚಾಗಿರುವ ಇಂತಹ ಮಹಾನ್ ವ್ಯಕ್ತಿಗಳ ಜನ್ಮ ದಿನ ಆಚರಿಸಿದರಷ್ಟೇ ಸಾಲದು ಅವರ ಚಿಂತನೆಗಳನ್ನು ವಿದ್ಯಾರ್ಥಿಗಳು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಗೌರವ ನೀಡಬೇಕು ಎಂದರು.

ಇದೇ ವೇಳೆ ನಾಡಪ್ರಭು ಕೆಂಪೇಗೌಡರ ಛದ್ಮವೇಷದಲ್ಲಿ ಕಾರ್ಯಕ್ರಮಕ್ಕೆ ಆಗಮಿಸಿದ್ದ ವಿದ್ಯಾರ್ಥಿಗೆ ಹಾಗೂ ಪ್ರಬಂಧ, ಬಾಷಣ, ರಂಗೋಲಿ ಸ್ಪರ್ಧೆಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ತಾಲೂಕಾಡಳಿತದ ವತಿಯಿಂದ ಪ್ರಶಸ್ತಿ ಪತ್ರ ನೀಡಲಾಯಿತು. ಸ್ಪರ್ಧೆಯಲ್ಲಿ ಕನ್ಯಾ ಶಾಲೆ, ಬಾಲಕಿಯರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಈ ವೇಳೆ ಉಪ ತಹಸೀಲ್ದಾರ್ ಸತೀಶ ಗಂಡಿಗಾರಿ, ಸಮಾಜ ಕಲ್ಯಾಣ ಇಲಾಖೆ ತಾಲೂಕಾಧಿಕಾರಿ ರಾಮಚಂದ್ರ ಸಂಗನಾಳ, ಪರಿಶಿಷ್ಟ ವರ್ಗಗಳ ಕಲ್ಯಾಣ ಅಧಿಕಾರಿ ವೀರಪ್ಪ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಾರ್ಯದರ್ಶಿ ನೀಲಪ್ಪ ಶೆಟ್ಟಿ, ಶಿಕ್ಷಣ ಇಲಾಖೆ ದೈಹಿಕ ಶಿಕ್ಷಣ ಪರಿವೀಕ್ಷಕಿ ಸರಸ್ವತೀದೇವಿ ಉಪಸ್ಥಿತರಿದ್ದರು.
ವಿವಿಧ ಇಲಾಖೆ ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ಮುಖ್ಯಶಿಕ್ಷಕರು, ಸಹ ಶಿಕ್ಷಕರು, ಕಂದಾಯ ಇಲಾಖೆ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಕಂದಕೂರು ಗ್ರಾಮ ಪಂಚಾಯಿತಿ ಕಾರ್ಯಾಲಯದಲ್ಲಿ ಗುರುವಾರ ಅಭಿವೃದ್ಧಿ ಅಧಿಕಾರಿ ಸೇರಿದಂತೆ ಅಧ್ಯಕ್ಷ, ಉಪಾಧ್ಯಕ್ಷ, ಸರ್ವ ಸದಸ್ಯರು, ಗ್ರಾಮಸ್ಥರು ನಾಡಪ್ರಭು ಕೆಂಪೇಗೌಡರ ಭಾವಚಿತ್ರ ಪೂಜಿಸುವ ಮೂಲಕ ಜಯಂತಿ ಕಾರ್ಯಕ್ರಮ ಸರಳವಾಗಿ ಆಚರಿಸಿದರು.

ಹನುಮಸಾಗರ ಗ್ರಾಮ ಪಂಚಾಯಿತಿ ಕಾರ್ಯಾಲಯದಲ್ಲಿ ಗುರುವಾರ ಪಂಚಾಯತಿ ಅಭಿವೃದ್ಧಿ ಅಧಿಕಾರಿ, ಅಧ್ಯಕ್ಷ, ಉಪಾಧ್ಯಕ್ಷ, ಸರ್ವ ಸದಸ್ಯರು ಮತ್ತು ಗ್ರಾಮಸ್ಥರು ಸೇರಿ ನಾಡಪ್ರಭು ಕೆಂಪೇಗೌಡರ ಭಾವಚಿತ್ರ ಪೂಜಿಸುವ ಮೂಲಕ ಗೌರವ ಸಮರ್ಪಿಸಿದರು.