ಸುಧಾ ಹೂಗಾರ ಬಾಳಿಗೆ ಬೆಳಕಾದ ನರೇಗಾ!

ಕೃಷಿಪ್ರಿಯ..
ಸುದ್ದಿ ಸಮರ್ಪಣ |

ಕೊಪ್ಪಳ : ಚಿಕ್ಕ ವಯಸ್ಸಿನಲ್ಲೇ ಪತಿಯನ್ನು ಕಳೆದುಕೊಂಡು ಒಂದು ಹೆಣ್ಣು ಮಗಳೊಂದಿಗೆ ಸಂಕಷ್ಟದ ಬದುಕು ಸಾಗಿಸುತ್ತಿದ್ದ ಮಹಿಳೆಯೋರ್ವಳ ಬಾಳಿಗೆ ಉದ್ಯೋಗ ಖಾತ್ರಿ ಆಸರೆಯಾಗಿದೆ.

ಹೌದು, ಜಿಲ್ಲೆಯ ಕುಷ್ಟಗಿ ತಾಲೂಕಿನ ಕಂದಕೂರು ಗ್ರಾಮದ ಸುಧಾ ಹೂಗಾರ ಎಂಬ ಮಹಿಳೆ ಕಳೆದ ನಾಲ್ಕು ವರ್ಷದಿಂದ ಮನರೇಗಾ ಯೋಜನೆಯಡಿ ಕೆಲಸ ಮಾಡಿ ಬದುಕು ಸುಧಾರಿಸಿಕೊಳ್ಳುತ್ತಿದ್ದಾರೆ. ಪ್ರೀತಿಸಿ ಮದುವೆಯಾಗಿದ್ದ ಸುಧಾ ಹೂಗಾರ ಪತಿ ಮತ್ತು ತನ್ನ ಮಗಳೊಂದಿಗೆ ಸುಖಿಯಾಗಿದ್ದರು. ಆದರೆ, ಕುಟುಂಬಕ್ಕೆ ಆಸರೆಯಾಗಿದ್ದ ಪತಿ ಅನಾರೋಗ್ಯಕ್ಕೆ ಈಡಾಗಿ ಸಾವನ್ನಪ್ಪಿದರು. ಪತಿಯ ಅಕಾಲಿಕ ಸಾವಿನಿಂದ ಸಂಕಷ್ಟಕ್ಕೆ ಸಿಲುಕಿದ ಸುಧಾ ಅವರು, ಧೃತಿಗೇಡದೇ ಕಂದಕೂರಲ್ಲೇ ಇದ್ದುಕೊಂಡು ಕೂಲಿನಾಲಿ ಮಾಡಿಕೊಂಡಿದ್ದರು. ಮಗಳ ವಿದ್ಯಾಭ್ಯಾಸ ಮತ್ತು ಜೀವನ ನಿರ್ವಹಣೆಗೆ ಕೂಲಿಹಣ ಸಾಕಾಗದೇ ಚಿಂತೆಗೆ ಒಳಗಾಗಿದ್ದರು.

ನೆರೆ ಹೊರೆಯವರಿಂದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಬಗ್ಗೆ ಮಾಹಿತಿ ಪಡೆದ ಸುಧಾ ಅವರು, ಗ್ರಾಮ ಪಂಚಾಯತಿಗೆ ಭೇಟಿ ನೀಡಿ ಜಾಬ್‌ ಕಾರ್ಡ್‌ ಮಾಡಿಸಿಕೊಂಡರು. ಕಳೆದ ನಾಲ್ಕು ವರ್ಷಗಳಿಂದ ನರೇಗಾದಡಿ ಕೆಲಸ ಮಾಡುತ್ತಿದ್ದು, ಇದರಿಂದ ಸುಧಾ ಅವರ ಜೀವನ ನಿರ್ವಹಣೆ ಸುಧಾರಿಸಿದೆ. ಅಲ್ಲದೇ, ಮಗಳಿಗೆ ಓದಿನ ಖರ್ಚಿಗೂ ಅನುಕೂಲವಾಗಿದ್ದು, ಉದ್ಯೋಗ ಖಾತ್ರಿ ಕೆಲಸ ಇಲ್ಲದ ವೇಳೆ ಜಮೀನುಗಳಿಗೆ ತೆರಳಿ ಕೂಲಿ ಕೆಲಸ ಮಾಡುತ್ತಿದ್ದಾರೆ.

ಪ್ರೀತಿಸಿ ಮದುಯಾಗಿ ಕೆಲ ವರ್ಷಗಳಲ್ಲೇ ಗಂಡನನ್ನು ಕಳೆದುಕೊಂಡು, ಇದ್ದೂದರಲ್ಲೇ ಜೀವನ ನಡೆಸುತ್ತಿದ್ದ ಸುಧಾ ಹೂಗಾರ ಅವರ ಸ್ವಾವಲಂಬಿ ಬದುಕಿಗೆ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಆಸರೆಯಾಗಿರೋದಂತು ಸುಳ್ಳಲ್ಲ.

ಮಾಹಿತಿ : ಚಂದ್ರಶೇಖರ ಹಿರೇಮಠ, ಐಇಸಿ ಸಂಯೋಜಕ, ತಾ.ಪಂ. ಕುಷ್ಟಗಿ.

ಗ್ರಾಮದಲ್ಲಿ ಜಮೀನುಗಳಿಗೆ ಕೆಲಸಕ್ಕೆ ಹೋಗಿ ಬಂದಂತ ₹200 ಕೂಲಿಯಿಂದ ಮನೆ ನಿರ್ವಹಣೆ ತುಂಬಾ ಕಷ್ಟಕರವಾಗಿತ್ತು. ಆದರೇ, ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸಕ್ಕೆ ಹೋದಾಗಿನಿಂದ ತುಂಬಾ ಅನುಕೂಲವಾಗಿದೆ. ಯೋಜನೆಯಡಿ ಸದ್ಯ ₹349 ಕೂಲಿ ಹಣ ಸಿಗುತ್ತಿರುವುದರಿಂದ ಮನೆ ನಿರ್ವಹಣೆಯು ಸಾಧ್ಯವಾಗಿದೆ.

– ಸುಧಾ ಸಿ ಹೂಗಾರ,
ಕೂಲಿಕಾರ ಮಹಿಳೆ ಕಂದಕೂರು.

ಉದ್ಯೋಗ ಖಾತ್ರಿ ಯೋಜನೆಯಡಿ ಸಾಕಷ್ಟು ಮಹಿಳೆಯರು ಸ್ವಾವಲಂಬಿ ಬದುಕನ್ನು ಕಟ್ಟಿಕೊಂಡಿದ್ದಾರೆ. ತಾಲೂಕಿನ ಎಲ್ಲಾ ಗ್ರಾಮ ಪಂಚಯತಿಗಳಲ್ಲಿ ಕೂಲಿಕಾರರಿಗೆ ಕೆಲಸ ನೀಡಲಾಗುತ್ತಿದ್ದು, ಗುಳೆ ಹೋಗುವುದನ್ನು ತಪ್ಪಿಸಲಾಗುತ್ತಿದೆ. ಇದ್ದೂರಲ್ಲೇ ಸುಂದರ ಬದುಕು ಕಟ್ಟಿಕೊಳ್ಳುವಲ್ಲಿ ನಮ್ಮ ನರೇಗಾ ಯೋಜನೆ ಸಹಕಾರಿಯಾಗಿದೆ.

– ನಿಂಗಪ್ಪ ಎಸ್ ಮಸಳಿ,
ತಾ.ಪಂ. ಕಾರ್ಯನಿರ್ವಾಹಣ ಅಧಿಕಾರಿ ಕುಷ್ಟಗಿ.