ಕೃಷಿಪ್ರಿಯ..
ಸುದ್ದಿ ಸಮರ್ಪಣ |
ಕೊಪ್ಪಳ : ಹುಚ್ಚು ಹಿಡಿದ ಮಂಗವೊಂದು ಕಳೆದ ಮೂರು ದಿನಗಳಿಂದ ಸುಮಾರು 20ಕ್ಕೂ ಹೆಚ್ಚು ಜನರ ಮೇಲೆ ದಾಳಿ ಮಾಡಿ ಗಾಯಗೊಳಿಸಿದ ಘಟನೆ ಜಿಲ್ಲೆಯ ಕುಷ್ಟಗಿ ತಾಲೂಕಿನ ನೀರಲೂಟಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಮಾಬುಸಾಬ ಇಮಾಮಸಾಬ ಪಿಂಜಾರ, ದೇವಪ್ಪ ಬಸಪ್ಪ ಕಂಬಾರ, ಮಲ್ಲಪ್ಪ ಹನಮಪ್ಪ ಅಗಸಿ ಮುಂದಿನ, ಅಡಿವೆಪ್ಪ ಹಿರೇಹನಮಂತಪ್ಪ ಚಳ್ಳಾರಿ, ಶಂಕ್ರಮ್ಮ ಬಾಲಪ್ಪ ಬೆಣಕಲ್ ಸೇರಿದಂತೆ 20 ಕ್ಕಿಂತ ಹೆಚ್ಚು ಜನರ ಮೇಲೆ ಮಂಗ ದಾಳಿ ಮಾಡಿ ದೇಹದ ಕಂಡ ಕಂಡ ಭಾಗದಲ್ಲಿ ಕಚ್ಚಿ ಗಾಯಗೊಳಿಸಿದೆ. ಗಾಯಾಳುಗಳನ್ನು ಶನಿವಾರ ಬೆಳಿಗ್ಗೆ ಆಂಬುಲೆನ್ಸ್ ಮೂಲಕ ಕುಷ್ಟಗಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಚಿಕಿತ್ಸಾ ಸ್ಥಳಕ್ಕೆ ಕಂದಾಯ ನಿರೀಕ್ಷಕ ಶರಣಯ್ಯ ಹಿರೇಮಠ ಭೇಟಿ ನೀಡಿ ವಿಚಾರಿಸುತಿದ್ದಾರೆ.
ಕಳೆದೊಂದು ತಿಂಗಳಿನಿಂದ ಮಂಗನ ಹುಚ್ಚಾಟ ಹೆಚ್ಚಾಗಿದ್ದು, ಮಹಿಳೆಯರು, ಮಕ್ಕಳು, ವೃದ್ದರು ಮನೆಯಿಂದ ಆಚೆ ಬರದಂತ ಭಯದ ಪರಿಸ್ಥಿತಿ ಗ್ರಾಮದಲ್ಲಿ ನಿರ್ಮಾಣವಾಗಿದೆ. ಹುಚ್ಚು ಹಿಡಿದ ಮಂಗನ ಸೆರೆಗೆ ಕ್ರಮ ಕೈಗೊಳ್ಳುವಂತೆ ಹಿರೇಮನ್ನಾಪೂರು ಗ್ರಾಮ ಪಂಚಾಯಿತಿಗೆ ಸಾಕಷ್ಟು ಬಾರಿ ತಿಳಿಸಲಾಗಿದೆ.
ಆದರೆ, ಯಾವುದೇ ಕ್ರಮಕ್ಕೆ ಮುಂದಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿರುವ ಗ್ರಾಮಸ್ಥರು ಸ್ವತಃ ತಮ್ಮ ರಕ್ಷಣೆಗಾಗಿ ಹಗಲು-ರಾತ್ರಿ ಕೈಯಲ್ಲಿ ಡೊಣ್ಣೆ ಹಿಡಿದು ಮಂಗನ ಓಡಿಸಲು ಮುಂದಾಗಿದ್ದಾರೆ. ಇಂದು ಬೆಳಿಗ್ಗೆ ಮತ್ತೆ ನಾಲ್ಕೈದು ಜನರ ಮೇಲೆ ಮಂಗ ದಾಳಿ ಮಾಡಿದ್ದು, ಎಚ್ಚೆತ್ತ ಅರಣ್ಯ ಇಲಾಖೆ ಗ್ರಾಮಕ್ಕೆ ಭೇಟಿ ನೀಡಿ ಮಂಗನ ಸೆರೆ ಹಿಡಿಯಲು ಕಾರ್ಯಾಚರಣೆ ನಡೆಸಿದೆ ಎಂದು ಗ್ರಾಮದವರು ತಿಳಿಸಿದ್ದಾರೆ.