ಕೃಷಿಪ್ರಿಯ..
ಸುದ್ದಿ ಸಮರ್ಪಣ |
ಕುಷ್ಟಗಿ : ಯಾವುದೇ ರೀತಿಯ ಪರವಾನಗಿ ಇಲ್ಲದೇ ತಾಲೂಕಿನಲ್ಲಿ ನಾಯಿಕೊಡೆಯಂತೆ ತಲೆ ಎತ್ತಿರುವ ಅನಧಿಕೃತ ಕೋಚಿಂಗ್ ಸೆಂಟರ್’ಗಳ ಕಡಿವಾಣಕ್ಕೆ ಮುಂದಾಗಿ ಎಂದು ಶಾಸಕ ದೊಡ್ಡನಗೌಡ ಎಚ್.ಪಾಟೀಲ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಪಟ್ಟಣದ ಹೊರವಲಯ ಸರ್ಕ್ಯೂಟ್ ಹೌಸ್’ನಲ್ಲಿ ಶನಿವಾರ ನಡೆದ ತ್ರೈಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಹೊಂದಿರುವ ವಿದ್ಯಾರ್ಥಿಗಳು ಗೈರಾಗಿ ಕೋಚಿಂಗ್ ಸೆಂಟರ್’ಗಳಲ್ಲಿ ಕಲಿಯುತ್ತಿರುವ ಕುರಿತು ಕೇಳಿಬರುತ್ತಿದೆ. ಅಲ್ಲಿ ಕಲಿಯುತ್ತಿರುವ ಮಕ್ಕಳಿಗೆ ಹೆಚ್ಚುಕಡಿಮೆಯಾದರೆ ಸರ್ಕಾರಿ ಶಾಲೆ ಶಿಕ್ಷಕರು ಹೊಣೆಯಾಗುತ್ತಾರೆ. ತಾಲೂಕಿನಲ್ಲಿ ಪರವಾನಗಿ ಪಡೆದಿರುವ, ಅನಧಿಕೃತವಾಗಿ ತಲೆಎತ್ತಿರುವ ಕೋಚಿಂಗ್ ಸೆಂಟರಗಳು ಎಷ್ಟಿವೆ ತಾವೇನು ಕ್ರಮವಹಿಸಿದ್ದೀರಿ ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಶಾಸಕ ಡಿ.ಎಚ್. ಪಾಟೀಲ್ ಪ್ರಶ್ನೆಸಿದರು.
ಈ ಕುರಿತು ಮಾಹಿತಿ ನೀಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಸುರೇಂದ್ರ ಕಾಂಬಳೆ ಅವರು, ಕೋಚಿಂಗ್ ಸೆಂಟರ್ ನಡೆಸಲು ಡಿಡಿಪಿಐ ಅವರಿಂದ ಪರವಾನಗಿ ಪಡೆದುಕೊಳ್ಳಬೇಕು. ಬೆಳಗಿನ ಶಾಲಾ ಅವಧಿಯೋಳಗೆ ಮತ್ತು ಸಂಜೆ ಶಾಲಾವಧಿ ನಂತರ ಮಕ್ಕಳಿಗೆ ಕೋಚಿಂಗ್ ನಡೆಸಬಹುದಾಗಿದೆ. ಆದರೆ, ಪಟ್ಟಣ ಸೇರಿದಂತೆ ತಾಲೂಕಿನಲ್ಲಿ ಪರವಾನಗಿ ಪಡೆಯದ ಕೋಚಿಂಗ್ ಸೆಂಟರ್’ಗಳಿಗೆ ಈಗಾಗಲೇ ನೋಟಿಸ್ ನೀಡಲಾಗಿದೆ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಪ್ರೋತ್ಸಾಹದಲ್ಲಿ ಕೋಚಿಂಗ್ ಸೆಂಟರ್’ಗಳು ನಡೆಯುತ್ತಿವೆ ಎಂದು ಕೆಡಿಪಿ ನಾಮನಿರ್ದೇಶಿತ ಸದಸ್ಯರು ಆರೋಪಿಸಿದರು.
ನಂತರ ಶಾಸಕ ದೊಡ್ಡನಗೌಡ ಎಚ್. ಪಾಟೀಲ್ ಅವರು ಕೋಚಿಂಗ್ ಸೆಂಟರಗಳ ಕಡಿವಾಣಕ್ಕೆ ತಂಡ ರಚಿಸಲು ತಿಳಿಸಿದರು. ತಹಸೀಲ್ದಾರ್, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ, ಕ್ಷೇತ್ರ ಶಿಕ್ಷಣಾಧಿಕಾರಿ ಮತ್ತು ಪುರಸಭೆ ಮುಖ್ಯಾಧಿಕಾರಿ ಒಳಗೊಂಡ ತಂಡ ರಚಿಸಿಕೊಂಡು ಪಟ್ಟಣ ಸೇರಿದಂತೆ ತಾಲೂಕಿನಲ್ಲಿ ನಾಯಿಕೊಡೆಯಂತೆ ತಲೆಎತ್ತಿರುವ ಕೋಚಿಂಗ್ ಸೆಂಟರ್’ಗಳಿಗೆ ಭೇಟಿ ನೀಡಿ ಪರಿಶೀಲಿಸಬೇಕು. ಶಾಲಾವಧಿಯೋಳಗೆ ಕೋಚಿಂಗ್ ಸೆಂಟರಗಳಲ್ಲಿ ಮಕ್ಕಳು ಕಂಡುಬಂದರೆ ಕೂಡಲೆ ಕ್ರಮಕೈಗೊಳ್ಳಬೇಕು. ಪರವಾನಗಿ ಪಡೆದ ಕೋಚಿಂಗ್ ಸೆಂಟರಗಳಿಗೆ ತೊಂದರೆ ಕೊಡಬಾರದು ಎಂದು ಶಾಸಕರು ಖಡಕ್ಕಾಗಿ ಸೂಚಿಸಿದರು.
ನಂತರ ಬೇರೆ ಬೇರೆ ಇಲಾಖೆಗಳ ಪ್ರಗತಿ ಕುರಿತು ಚರ್ಚೆಗಳು ನಡೆದವು. ಈ ವೇಳೆ ತಹಸೀಲ್ದಾರ್ ಶೃತಿ ಮಳ್ಳಪ್ಪಗೌಡರ್, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣ ಅಧಿಕಾರಿ ನಿಂಗಪ್ಪ ಎಸ್.ಮಸಳಿ, ಕ್ಷೇತ್ರ ಶಿಕ್ಷಣಾಧಿಕಾರಿ ಸುರೇಂದ್ರ ಕಾಂಬಳೆ ಮತ್ತು ಪುರಸಭೆ ಮುಖ್ಯಾಧಿಕಾರಿ ಧರಣೇಂದ್ರಕುಮಾರ, ಆರ್.ಡಬ್ಲ್ಯೂ. ಎಸ್. ಉಪವಿಭಾಗದ ಎಇಇ ವಿಜಯಕುಮಾರ ಪೂಜಾರ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಇದ್ದರು.