ಜು.24ಕ್ಕೆ ಹೈದ್ರಾಬಾದ್ ಪ್ರಾಂತ್ಯ ಸ್ವಾತಂತ್ರ್ಯ ಸೇನಾನಿಗಳ ಪುಣ್ಯಸ್ಮರಣೆ, ಪುಣ್ಯತಿಥಿ ಆಚರಣೆಗೆ ನಿರ್ಧಾರ

ಸುದ್ದಿ ಸಮರ್ಪಣ |

ಕುಷ್ಟಗಿ : ಹೈದ್ರಾಬಾದ ಪ್ರಾಂತ್ಯ ಸ್ವಾತಂತ್ರ್ಯ ಸೇನಾನಿಗಳಾದ ಮಹಾತಪಸ್ವಿ ಮುರಡಿ ಭೀಮಜ್ಜ ಅವರ 68ನೇ ಪುಣ್ಯಸ್ಮರಣೆ ಹಾಗೂ ದಿ.ಪುಂಡಲೀಕಪ್ಪ ಜ್ಞಾನಮೋಟೆ ಅವರ 11ನೇ ಪುಣ್ಯಸ್ಮರಣೆ ಕಾರ್ಯಕ್ರಮ ಜುಲೈ 24ರಂದು ಪಟ್ಟಣದ ಬಸವ ಭವನದಲ್ಲಿ ಆಯೋಜಿಸಲು ನಿರ್ಧರಿಸಲಾಗಿದೆ.

ಪಟ್ಟಣದಲ್ಲಿ ಶ್ರೀಭೀಮಜ್ಜ ಮುರಡಿ ತಪೋಭೂಮಿ ಸೇವಾ ಟ್ರಸ್ಟ್ ಮತ್ತಿತರ ಸಂಘಟನೆಗಳ ಪ್ರಮುಖರು ಹಾಗೂ ಊರಿನ ಗಣ್ಯರು ಇತ್ತೀಚೆಗೆ ಪೂರ್ವಭಾವಿ ಸಭೆ ಸೇರಿ ಮಹಾತಪಸ್ವಿ ಮುರಡಿ ಭೀಮಜ್ಜ ಹಾಗೂ ದಿ.ಪುಂಡಲೀಕಪ್ಪ ಜ್ಞಾನಮೋಟೆ ಅವರ ಪುಣ್ಯಸ್ಮರಣೆ ಕಾರ್ಯಕ್ರಮ ಪ್ರತಿವರ್ಷದಂತೆ ಈ ಬಾರಿ ಅರ್ಥಪೂರ್ಣವಾಗಿ ಹಮ್ಮಿಕೊಳ್ಳಲು ತೀರ್ಮಾನಿಸಿದರು.

ವಿಶೇಷ ಉಪನ್ಯಾಸ, ಭಾಷಣ ಸ್ಪರ್ಧೆ: ಕಾರ್ಯಕ್ರಮ ಅಂಗವಾಗಿ ಜು.19ರಂದು ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಕುಷ್ಟಗಿ ತಾಲೂಕಿನ ಸ್ವಾತಂತ್ರ್ಯ ಹೋರಾಟಗಾರರ ಕಥೆ – ವ್ಯಥೆ ಎಂಬ ವಿಷಯ ಕುರಿತು ಪಿಯು ವಿದ್ಯಾರ್ಥಿಗಳಿಂದ ತಾಲೂಕು ಮಟ್ಟದ ಭಾಷಣ ಸ್ಪರ್ಧೆ ಹಾಗೂ ಜು.23ರಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪದವಿ ವಿದ್ಯಾರ್ಥಿಗಳಿಗೆ ಹೈದ್ರಾಬಾದ್ ವಿಮೋಚನಾ ಹೋರಾಟ ಕುರಿತು ಸ್ಥಳೀಯ ಸಂಶೋಧಕ ಸಾಹಿತಿ ಡಾ.ಕೆ.ಶರಣಪ್ಪ ನಿಡಶೇಸಿ ಅವರಿಂದ ವಿಶೇಷ ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಳ್ಳಲು ತೀರ್ಮಾನಿಸಲಾತು. ಹಾಗೆಯೇ ಕಾರ್ಯಕ್ರಮದ ಪ್ರಚಾರಕ್ಕಾಗಿ ಕುರಿತು ‘ಕಿರು ವಾಟ್ಸಾಪ್ ನುಡಿಚಿತ್ರ’ ನಿರ್ಮಿಸಿ ಪ್ರಚುರಪಡಿಸುವ ಬಗ್ಗೆ ಚರ್ಚಿಸಿ ಇದರ ಸಂಪೂರ್ಣ ಹೊಣೆಯನ್ನು ಶಿಕ್ಷಕ ನಟರಾಜ ಸೋನಾರ ಹಾಗೂ ಪ್ರಗತಿಪರ ಹೋರಾಟಗಾರ ಬಸವರಾಜ ಗಾಣಿಗೇರ ಅವರಿಗೆ ವಹಿಸಲಾಯಿತು.
ಜು.24 ರಂದು ಬಸವ ಭವನದಲ್ಲಿ ನಡೆಯಲಿರುವ ಕಾರ್ಯಕ್ರಮಕ್ಕೂ ಮುನ್ನ ಸ್ವಾತಂತ್ರ್ಯ ಯೋಧ ಬಿ.ಕಿಶನರಾವ್ ಬನ್ನಿಗೋಳ ಅವರನ್ನು ಅವರ ನಿವಾಸಕ್ಕೆ ತೆರಳಿ ಗೌರವಿಸುವುದು. ಸಂತರಾದ ಪಂಡರಾಪುರ ದಾದಾ ಭಜರಂಗ ಬುವಾ ಬೋದಲೆ ಮಹಾರಾಜ ಹಾಗೂ ಯಶವಂತ ಮಹಾರಾಜ ಬೋದಲೆ ಅವರನ್ನು ಕಾರ್ಯಕಾರ್ಯಮಕ್ಕೆ ಆಹ್ವಾನಿಸುವುದು ಹಾಗೂ ಹೈದರಾಬಾದ್ ವಿಮೋಚನೆ ಹೋರಾಟ ಕುರಿತು ಅಮೂಲ್ಯ ಕೃತಿಗಳನ್ನು ರಚಿಸಿದ ರಾಯಚೂರಿನ ಹಿರಿಯ ಸಾಹಿತಿ ರಾಮಣ್ಣ ಹವಳೆ ಅವರನ್ನು ಸನ್ಮಾನಿಸುವ ಕುರಿತು ಹಾಗೂ ಬಡ ವಿಕಲಚೇತನ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ವಿತರಣೆ, ತಾಲೂಕು ಮಟ್ಟದ ಭಾಷಣ ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಪುಸ್ತಕ ಬಹುಮಾನ ವಿತರಣೆ ನೀಡುವುದು ಸೇರಿದಂತೆ ಪಂ.ಪುಟ್ಟರಾಜ ಸಂಗೀತ ಪಾಠಶಾಲೆ ಯಿಂದ ಸಂಗೀತ ಕಾರ್ಯಕ್ರಮ, ಬಳ್ಳಾರಿಯ ಕುಮಾರಿ ಸ್ಮಿತಾ, ಕುಮಾರಿ ಸಾನ್ವಿ ಎಸ್. ಝಾಡೆ ಇವರಿಂದ ಭರತನಾಟ್ಯ ಪ್ರದರ್ಶನ ನೀಡಲು ಆಸಕ್ತಿ ಹೊಂದಿದ್ದು, ಅವರಿಗೆ ಅವಕಾಶ ನೀಡಲು ತೀರ್ಮಾನಿಸಲಾಯಿತು.

ಮೇಲ್ಸೇತುವೆಗೆ ನಾಮಫಲಕ: ಪಟ್ಟಣದ ಮಧ್ಯೆ ಹಾಯ್ದುಹೋದ ರಾಷ್ಟ್ರೀಯ ಹೆದ್ದಾರಿ ಮೇಲ್ಸೇತುವೆಗೆ ಹಿರಿಯ ಸ್ವಾತಂತ್ರ್ಯಯೋಧ, ಮಾಜಿ ಶಾಸಕ ಪುಂಡಲೀಕಪ್ಪ ಜ್ಞಾನಮೋಟೆ ಅವರ ಹೆಸರು ರಾಜ್ಯ ಸರ್ಕಾರ ಘೋಷಣೆ ಮಾಡಿ ಉದ್ಘಾಟಿಸಿದೆ. ಆದರೆ, ನಾಮಫಲಕ ಅಳವಡಿಸುವ ಕೆಲಸ ನನೆಗುದಿಗೆ ಬಿದ್ದಿದೆ. ಇದನ್ನು ಶೀಘ್ರದಲ್ಲೇ ಅಳವಡಿಸುವ ಕುರಿತು ಜಿಲ್ಲಾ ಉಸ್ತುವಾರಿ ಸಚಿವ, ಸಂಸದ ಹಾಗೂ ಸ್ಥಳೀಯ ಶಾಸಕರಿಗೆ ಮನವಿ ಮೂಲಕ ಗಮನಕ್ಕೆ ತರಲು ನಿರ್ಣಯ ಕೈಗೊಳ್ಳಲಾಯಿತು.

ಈ ಸಭೆಯಲ್ಲಿ ಶ್ರೀ ಭೀಮಜ್ಜ ಮುರಡಿ ತಪೋಭೂಮಿ ಸೇವಾ ಟ್ರಸ್ಟನ ಸಂಚಾಲಕ ಅಮೃತರಾಜ ಜ್ಞಾನಮೋಟೆ, ಪ್ರಮುಖರಾದ ವೀರೇಶ ಬಂಗಾರಶೆಟ್ಟರ್, ಡಾ.ನಾಗರಾಜ ಹೀರಾ, ಪತ್ರಕರ್ತ ಮುಖೇಶ ನಿಲೋಗಲ್, ಅಪ್ಪಣ್ಣ ನವಲೆ, ನಟರಾಜ ಸೋನಾರ, ಡಾ.ಜೀವನಸಾಬ ಬಿನ್ನಾಳ, ಮಹೇಶ ಜಿ.ಹೆಚ್., ರವೀಂದ್ರ ಬಾಕಳೆ, ಕಿರಣ ಜ್ಯೋತಿ, ಬಸವರಾಜ ಗಾಣಿಗೇರ ಸೇರಿದಂತೆ ಇತರರಿದ್ದರು.