ಸುದ್ದಿ ಸಮರ್ಪಣ |
ಕುಷ್ಟಗಿ : ಬೆಳೆ ನಡುವಿನ ಕಳೆ ಕೀಳಲು ರೈತನೊಂದಿಗೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯೊಬ್ಬರು ಆಸರೆಯಾಗಿ ಎಡೆಕುಂಟಿ ಹೊಡೆಯುವ ಮೂಲಕ ಗಮನ ಸೆಳೆದಿದ್ದಾರೆ.!
ಹೌದು.., ತಾಲೂಕಿನ ಕ್ಯಾದಿಗುಪ್ಪಾ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶ್ರೀಶೈಲ ಪೊಲೀಶಿ ಎಂಬುವರು ಭಾನುವಾರ ತಮ್ಮ ಬಿಡುವಿನ ವೇಳೆಯಲ್ಲಿ ರೈತನೊಂದಿಗೆ ಕೈಜೋಡಿಸಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ರೈತ ಬೇರಾರು ಅಲ್ಲ ಅದೇ ಗ್ರಾಮ ಪಂಚಾಯಿತಿ ಬಿಲ್ ಕಲೆಕ್ಟರ್’ ದುರುಗಪ್ಪ ಕಟ್ಟಿಮನಿ., ರೈತ ಗ್ರಾಮ ಸೀಮಾ ವ್ಯಾಪ್ತಿಯ ತಮ್ಮ ಸಜ್ಜೆ ಹೊಲದಲ್ಲಿ ಜೋಡೆತ್ತುಗಳೊಂದಿಗೆ ಬೆಳೆ ನಡುವೆ ಬೆಳೆದಿರುವ ಕಳೆ(ಕಸ) ಕೀಳಲು ಮುಂದಾಗಿದ್ದರು. ಇಳಕಲ್ ಕಡೆಯಿಂದ ದೋಟಿಹಾಳ ಕಡೆಗೆ ಹೊರಟಾಗ ಮಾರ್ಗಮಧ್ಯೆ ತಮ್ಮ ಬಿಲ್ ಕಲೆಕ್ಟರ್ ಎಡೆಕುಂಟಿ ಹೊಡೆಯುತ್ತಿವುದನ್ನು ಕಂಡು ರೈತನೊಂದಿಗೆ ತಾವೂ ಭಾಗಿಯಾಗಿದ್ದಾರೆ. ಈ ಕುರಿತು ಗ್ರಾಮಸ್ಥರನ್ನು ವಿಚಾರಿಸಿದಾಗ ರೈತರ ಮೇಲೆ ಅಪಾರ ಕಾಳಜಿ ಹೊಂದಿರುವ ಪಿಡಿಒ, ತಮ್ಮ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನರೇಗಾ ಯೋಜನೆಯಡಿ ಕೃಷಿ ಜಮೀನುಗಳಲ್ಲಿ ನಡೆಯುವ ವೈಯಕ್ತಿಕ ಬದು ನಿರ್ಮಾಣ, ಕೃಷಿ ಹೊಂಡ ಹಾಗೂ ಕೆರೆ ಹೂಳೆತ್ತುವುದು, ನಾಲಾ ಹೂಳೆತ್ತುವ ಸ್ಥಳಕ್ಕೆ ತೆರಳಿ ಸ್ವತಃ ಕೂಲಿಕಾರ್ಮಿಕರ ಕೆಲಸದಲ್ಲಿ ಜೊತೆಗೂಡಿ ಪ್ರೋತ್ಸಹಿಸುತ್ತಾರೆ ಎಂದು ಗ್ರಾಮಸ್ಥರು ಹಾಗೂ ಪಂಚಾಯಿತಿ ಸಿಬ್ಬಂದಿ ಹೇಳುತ್ತಾರೆ.
ಒಟ್ಟಾರೆ ಸಮಾಜದಲ್ಲಿ ನಾವು ರೈತನ ಮಕ್ಕಳು ಎಂದು ತೋರಿಕೊಳ್ಳುವವರ ನಡುವೆ ಪಿಡಿಒ ಶ್ರೀಶೈಲ ಪೊಲೀಶಿ ಅವರು ಸರ್ಕಾರಿ ಸೇವೆಯ ನಡುವೆ ರೈತರ ಮೇಲೆ ಹೊಂದಿರುವ ಕಾಳಜಿ, ಪ್ರೀತಿ, ಗೌರವ, ಕೃಷಿ ಚೆಟುವಟಿಕೆ ಮೇಲಿನ ಆಸಕ್ತಿ ಜನ ಮೆಚ್ಚುಗೆಗೆ ಪಾತ್ರವಾಗಿರುವುದಂತು ಸತ್ಯ.!!