ಸುದ್ದಿ ಸಮರ್ಪಣ |
ಕುಷ್ಟಗಿ : ತೋಟಗಾರಿಕೆ ಇಲಾಖೆ ವತಿಯಿಂದ ಕೊಪ್ಪಳ ಜಿಲ್ಲೆಯಲ್ಲಿ 2024-25ನೇ ಸಾಲಿನಲ್ಲಿ ಅನುಷ್ಠಾನಗೊಳ್ಳುತ್ತಿರುವ ವಿವಿಧ ಯೋಜನೆಗಳಡಿ ಸಹಾಯಧನ ಪಡೆಯಲು ಅರ್ಹ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ತೋಟಗಾರಿಕೆ ಹಿರಿಯ ಸಹಾಯಕ ನಿರ್ದೇಶಕ ಮಂಜುನಾಥ ಲಿಂಗಣ್ಣವರ ತಿಳಿಸಿದ್ದಾರೆ.
ಈ ಕುರಿತು ಅವರು ಸೋಮವಾರ ಮಾಧ್ಯಮ ಮುಖಾಂತರ ಪ್ರಕಟಣೆ ಹೊರಡಿಸಿದ್ದು, ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆ, ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯ (ಹನಿ ನೀರಾವರಿ), ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆ. ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಗಳಡಿ ತೋಟಗಾರಿಕೆ ಬೆಳೆಗಳ ಹೊಸ ಪ್ರದೇಶ ವಿಸ್ತರಣೆ, (ಗೇರು, ಪೇರಲ, ಮಾವು, ಬಾಳೆ, ದಾಳಿಂಬೆ, ಪಪ್ಪಾಯ, ಇತರೆ) ರೋಗ ಮತ್ತು ಕೀಟ ನಿಯಂತ್ರಣ. ನೀರು ಸಂಗ್ರಹಣಾ ಘಟಕ, ಕೊಯ್ಲೋತ್ತರ ನಿರ್ವಹಣೆ ಘಟಕಗಳಿಗೆ, ಸಂರಕ್ಷಿತ ಬೇಸಾಯ ಹಾಗೂ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ಯಾಂತ್ರೀಕರಣ ಹಾಗೂ ವಿವಿಧ ಘಟಕಗಳಿಗೆ ಸಹಾಯಧನ ಲಭ್ಯವಿದೆ.
ತೋಟಗಾರಿಕೆಯಲ್ಲಿ ವಿನೂತನ ತಂತ್ರಜ್ಞಾನ ಮತ್ತು ಯಂತ್ರೋಪಕರಣಗಳಿಗೆ ಸಹಾಯಧನ : 2024-25 ನೇ ಸಾಲಿನ ಕಾರ್ಯಕ್ರಮದಡಿ ಸೋಲಾರ್ ಪಂಪ್‌ಸೆಟ್ ಹಾಗೂ ವಿವಿಧ ಯಂತ್ರೋಪಕರಣಗಳನ್ನು ಖರೀದಿಸಲು ಸಾಮಾನ್ಯ ವರ್ಗದ ರೈತರಿಗೆ ಶೇ. 40 ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಸಣ್ಣ, ಅತಿ ಸಣ್ಣ ಹಾಗೂ ಮಹಿಳಾ ಫಲಾನುಭವಿಗಳಿಗೆ ಶೇ. 50 ರಂತೆ ಸಹಾಯಧನಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ. 3 ಎಚ್.ಪಿ. ಸೋಲಾರ್ ಪಂಪ್‌ಸೆಟ್‌ಗಳಿಗೆ ₹1 ಲಕ್ಷ ಹಾಗೂ 5 ಎಚ್.ಪಿ. ಹೆಚ್ಚಿನ ಸಾಮಾರ್ಥ್ಯದ ಸೋಲಾರ್ ಪಂಪ್‌ಸೆಟ್‌ಗಳಿಗೆ ₹1.50 ಲಕ್ಷ ಗಳಿಗೆ ಸಹಾಯಧನ ನೀಡಲಾಗುತ್ತಿದೆ.
ಈ ಮೇಲಿನ ಕೇಂದ್ರೀಯ ವಲಯ, ರಾಜ್ಯವಲಯ ಮತ್ತು ಜಿಲ್ಲಾ ವಲಯ ಯೋಜನೆಗಳ ಸಹಾಯಧನ ಪಡೆಯಲು ಆಸಕ್ತ ರೈತರು ಅರ್ಜಿ ಸಮೇತ ಅಗತ್ಯವಾದ ದಾಖಲಾತಿಗಳನ್ನು ಕುಷ್ಟಗಿ ಪಟ್ಟಣದಲ್ಲಿರುವ ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕರ ಕಛೇರಿಗೆ ಸಲ್ಲಿಸಲು ಈ ಮೂಲಕ ಕೋರಿದ್ದಾರೆ. ಸರ್ಕಾರ ನಿಗದಿಪಡಿಸಿದ ಮಾರ್ಗಸೂಚಿ ಹಾಗೂ ಲಭ್ಯವಿರುವ ಅನುದಾನದ ಮೇರೆಗೆ ಜೇಷ್ಟತಾವಾರು ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.