ಸುದ್ದಿ ಸಮರ್ಪಣ |
ಕುಷ್ಟಗಿ : ತಾಲೂಕಿನ ಚಳಗೇರಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಆರೋಗ್ಯ ಅಮೃತ ಅಭಿಯಾನದಡಿ ನರೇಗಾ ಕೂಲಿ ಕಾರ್ಮಿಕರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರಕ್ಕೆ ತಾಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ನಿಂಗನಗೌಡ ವಿ. ಹಿರೇಹಾಳ ಅವರು ಚಾಲನೆ ನೀಡಿ ಆರೋಗ್ಯ ಜಾಗೃತಿ ಮೂಡಿಸಿದರು.
ಸೋಮವಾರ ದಿನ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಲಾಲಬಂಡಿ ಗ್ರಾಮದ ಕೆರೆಯಂಗಳದಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಕೈಗೊಂಡ ಕೆರೆ ಹೂಳೆತ್ತುವ ಸ್ಥಳದಲ್ಲಿ ಕೂಲಿ ಕಾರ್ಮಿಕರ ಆರೋಗ್ಯದ ಹಿತದೃಷ್ಟಿಯಿಂದ ಆಯೋಜಿಸಿದ್ದ ಈ ವೊಂದು ಶಿಬಿರದಲ್ಲಿ ಆರೋಗ್ಯ ಸಿಬ್ಬಂದಿ ಪ್ರತಿಯೊಬ್ಬ ಕಾರ್ಮಿಕರ ರಕ್ತ ಪರೀಕ್ಷೆ ನಡೆಸಿದರು. ಸಕ್ಕರೆ ಕಾಯಿಲೆ, ರಕ್ತದೊತ್ತಡ (BP), ಕೆಮ್ಮು, ನೆಗಡಿ, ಜ್ವರ ಸೇರಿದಂತೆ ಹಲವು ಕಾಯಿಲೆಗಳ ತಪಾಸಣೆ ಬಳಿಕ ಮಾತ್ರೆಗಳನ್ನು ವಿತರಿಸಿದರು.
ಇದೇ ವೇಳೆ ಆರ್ಥಿಕ ಸಾಕ್ಷರತಾ ಕೇಂದ್ರದ ವತಿಯಿಂದ ಕೂಲಿಕಾರ್ಮಿಕರಿಗೆ ಬ್ಯಾಂಕ್ ಗಳಿಂದ ಸಿಗುವ ಸಾಲ ಸೌಲಭ್ಯಗಳ ಕುರಿತು ಮತ್ತು ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆ ಪಾಲಿಸಿ ಕುರಿತು ಮಾಹಿತಿ ನೀಡಲಾಯಿತು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶರಣಮ್ಮ ಚಂದಾಲಿಂಗ ಕಲಾಲಬಂಡಿ ಅವರು ಶಿಬಿರದ ಅಧ್ಯಕ್ಷತೆ ವಹಿಸಿದ್ದರು.
ಶಿಬಿರದಲ್ಲಿ ಗ್ರಾ.ಪಂ ಸದಸ್ಯರಾದ ಬಸವಂತಪ್ಪ ನಂದಿಹಾಳ, ಹುಸೇನಗೌಡ ಮಾಲಿಪಾಟೀಲ, ಮುರ್ತುಜಾ ಖಾನಗೌಡರ, ನಿಂಬವ್ವ ಕತ್ತಿ, ಸುಮಂಗಲ ದೋಟಿಹಾಳ ಹಾಗೂ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನಾಗರಾಜ, ತಾ.ಪಂ. ಅಧಿಕಾರಿಗಳು, ಆರೋಗ್ಯ ಇಲಾಖೆ ಅಧಿಕಾರಿಗಳು, ಆರೋಗ್ಯ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು, ಗ್ರಾ.ಪಂ. ಸಿಬ್ಬಂದಿ, ಕಾಯಕ ಬಂಧುಗಳು, ಕೂಲಿಕಾರ್ಮಿಕರು ಹಾಜರಿದ್ದರು.