ಸುದ್ದಿ ಸಮರ್ಪಣ |
ಕುಷ್ಟಗಿ : ಭಯಾನಕ ಹೈಪರ್ ಐಜಿಇ ಮೆಡಿಕೇಟೆಡ್ ಸೆಲ್ ಆಕ್ಟಿವೇಶನ್ ಸಿಂಡ್ರೋಮ್ ಎಂಬ ವಿಚಿತ್ರ ಕಾಯಿಲೆಯಿಂದ ಬಳಲುತ್ತಿರುವ ಜಿ.ಡಿ.ಚಾಂದನಿ ಎಂಬ ಮಹಿಳೆಯ ಚಿಕಿತ್ಸಾ ವೆಚ್ಚ ಭರಿಸುವಂತೆ ರಾಜ್ಯ ಸರ್ಕಾರಕ್ಕೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಘಟಕ ಆಗ್ರಹಿಸಿದೆ.
ಪಟ್ಟಣದ ತಹಸೀಲ್ದಾರ್ ಕಾರ್ಯಾಲಯದಲ್ಲಿ ಮಂಗಳವಾರ ಸಮಾವೇಶಗೊಂಡ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಘಟಕ ಪದಾಧಿಕಾರಿಗಳು ಈ ಕುರಿತು ರಾಜ್ಯ ಸರ್ಕಾರಕ್ಕೆ ಬರೆದ ಮನವಿ ಪತ್ರವನ್ನು ಸಲ್ಲಿಸಿ ಒತ್ತಾಯಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ನಾವೂರ ನಿವಾಸಿ ಧನಜಂಯರವರ 33 ವರ್ಷದ ಪುತ್ರಿ ಜಿ.ಡಿ.ಚಾಂದನಿ ಎಂಬುವರು ಭಯಾನಕ ಹೈಪರ್ ಐಜಿಇ ಮೆಡಿಕೇಟೆಡ್ ಸೆಲ್ ಆಕ್ಟಿವೇಶನ್ ಸಿಂಡ್ರೋಮ್ ಎಂಬ ವಿಚಿತ್ರ ಕಾಯಿಲೆಯಿಂದ ಬಳಲುತ್ತಿದ್ದು, ಹೈದ್ರಾಬಾದನ ಐ.ಜಿ.ಇ.ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರು ಒಂದು ಪುಟ್ಟ ಮಗು ಹೊಂದಿದ್ದು, ₹34 ಲಕ್ಷ ಚಿಕಿತ್ಸಾ ವೆಚ್ಚ ಭರಿಸಲಾಗದೇ ರಾಜ್ಯ ಸರಕಾರಕ್ಕೆ ದಯಾಮರಣ ಕೋರಿ ಪತ್ರ ಬರೆದಿದ್ದು, ಇದು ಮನಕಲಕುವ ಘಟನೆಯಾಗಿದೆ. ಹಲವು ಗ್ಯಾರಂಟಿಗಳನ್ನು ನೀಡಿ ಜನಪರವಾಗಿರುವ ಸರಕಾರ ಕೂಡಲೇ ಕ್ರಮಕೈಗೊಂಡು ರೋಗಿಯ ಚಿಕಿತ್ಸಾ ವೆಚ್ಚವನ್ನು ಹೊತ್ತು ವ್ಯವಸ್ಥೆ ಕಲ್ಪಿಸಬೇಕು ಎಂದು ಆಗ್ರಹಿಸಿರುವ ರೈತ ಸಂಘ, ಸರ್ಕಾರ ಸ್ಪಂದಿಸದೇ ಹೋದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ, ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ರಾಜ್ಯಾದ್ಯಾಂತ ಬೀದಿಗಿಳಿದು ಬಿಕ್ಷೆ ಬೇಡಿಯಾದರೂ ಜಿ.ಡಿ.ಚಾಂದನಿ ಅವರ ಚಿಕಿತ್ಸಾ ವೆಚ್ಚದ ಜವಾಬ್ದಾರಿ ವಹಿಸಿಕೊಳ್ಳಲಿದೆ ಎಂದು ಬರೆದ ಮನವಿ ಪತ್ರವನ್ನು ಗ್ರೇಡ್-2 ತಹಸೀಲ್ದಾರ್ ಬಿ.ವಿಜಯಾ ಅವರ ಮುಖಾಂತರ ಮುಖ್ಯಮಂತ್ರಿಗಳಿಗೆ ಸಲ್ಲಿಸಿದ್ದಾರೆ.
ಈ ವೇಳೆ ಹಸಿರು ಸೇನೆಯ ಜಿಲ್ಲಾಧ್ಯಕ್ಷ ನಜೀರಸಾಬ ಮೂಲಿಮನಿ, ತಾಲೂಕು ಗೌರವಾಧ್ಯಕ್ಷ ಶಂಕರಗೌಡ ಬೀಳಗಿ, ಮಹಿಳಾ ಘಟಕ ತಾಲೂಕಾಧ್ಯಕ್ಷೆ ಶಾಂತಮ್ಮ ಪಾಟೀಲ್, ಜಿಲ್ಲಾಧ್ಯಕ್ಷೆ ಆಶಾ ವೀರೇಶ ಸೇರಿದಂತೆ ಇತರರಿದ್ದರು.