ಸುದ್ದಿ ಸಮರ್ಪಣ |
ಕುಷ್ಟಗಿ : ಪಟ್ಟಣದ 19, 20ನೇ ವಾರ್ಡ್ ಡಂಬರ ಓಣಿಯಲ್ಲಿ ಡೆಂಗ್ಯೂ ಪ್ರಕರಣವೊಂದು ಪತ್ತೆಯಾಗಿದ್ದು, ನಿವಾಸಿಗಳಲ್ಲಿ ಆತಂಕ ಸೃಷ್ಠಿಯಾಗಿದೆ.
19ನೇ ವಾರ್ಡಿನ ನಿವಾಸಿ ಪಿಯುಸಿ ವಿದ್ಯಾಭ್ಯಾಸ ಮಾಡುತ್ತಿರುವ 18 ವರ್ಷದ ಯುವತಿ ಕಳೆದ ಒಂದು ವಾರದಿಂದ ತೀವ್ರ ಜ್ವರದ ಬಾಧೆಗೆ ಒಳಗಾಗಿದ್ದು, ಚಿಕಿತ್ಸೆಗಾಗಿ ಕೊಪ್ಪಳ ಜಿಲ್ಲಾಸ್ಪತ್ರೆಗೆ ದಾಖಲಾದಾಗ ಡೆಂಗ್ಯೂ ಇರುವುದು ದೃಢಪಟ್ಟಿದೆ. ಸಧ್ಯ ಯುವತಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾಳೆ. ಈ ವಿಷಯ ತಿಳಿಯುತಿದ್ದಂತೆ ಓಣಿಯ ನಿವಾಸಿಗಳಲ್ಲಿ ಆತಂಕ ಸೃಷ್ಠಿಯಾಗಿದೆ. ಓಣಿಯಲ್ಲಿ ಎಲ್ಲೆಂದರಲ್ಲಿ ಮೋರೆ ನೀರು, ಮಳೆ ನೀರು, ಕಸ-ಕಡ್ಡಿ ಸಂಗ್ರಹಗೊಂಡು ಪರಿಸರ ದುರ್ನಾತ ಹಿಡಿದಿದೆ. ಸೊಳ್ಳೆಗಳ ಕಾಟ ವಿಪರೀತವಾಗಿದೆ.
ಎಲ್ಲೆಲ್ಲಿ ಮಲಿನ : ಸಂತೆ ಬಯಲಿನಿಂದ 19 ಮತ್ತು 20ನೇ ವಾರ್ಡ್ ಡಂಬರ ಓಣಿಗೆ ತೆರಳುವ ರಸ್ತೆ ವಿಶ್ವನಾಥ ಹಿರೇಮಠ ಎಂಬುವರ ಮನೆಯಿಂದ ಅಂಗನವಾಡಿ ವರೆಗೂ ಮಡುಗಟ್ಟಿದ ಗಲೀಜು ನೀರು ನಿಂತು ಮಲೀನದಿಂದ ಕೂಡಿದೆ. ಓಣಿಯ ಕಾಲುವೆಗಳಲ್ಲಿ ಹೂಳು ತುಂಬಿ ಸೊಳ್ಳೆಗಳ ಉತ್ಪತ್ತಿಗೆ ಎಡೆಮಾಡಿಕೊಟ್ಟಿದೆ. ಸೊಳ್ಳೆಗಳ ಕಡಿತದಿಂದ ವಾರ್ಡಿನ ನಿವಾಸಿಗಳು ಜ್ವರದ ಬಾದೆಗೆ ಒಳಗಾಗಿ ಆಸ್ಪತ್ರೆಗಳಿಗೆ ಎಡತಾಕುತಿದ್ದಾರೆ.
ಓಣಿಯ ಸ್ವಚ್ಛತೆ ಕ್ರಮ ಕೈಗೊಳ್ಳುವಂತೆ ಪುರಸಭೆ ಸದಸ್ಯರಿಗೆ ಮತ್ತು ಪುರಸಭೆ ಅಧಿಕಾರಿಗಳಿಗೆ ಸಾಕಷ್ಟು ಬಾರಿ ಮನವಿ ಮಾಡಿದರೂ ಕ್ರಮಕ್ಕೆ ಮುಂದಾಗುತ್ತಿಲ್ಲ ಎಂದು ನಿವಾಸಿಗಳು ಆಕ್ರೋಶ ವ್ಯಕ್ತಪಡಿಸುತಿದ್ದಾರೆ. ಡೆಂಗ್ಯೂ ಜ್ವರದಿಂದ ಬಳಲುತ್ತಿರುವ ಯುವತಿಯ ಪಾಲಕರು ಮತ್ತು ನಿವಾಸಿಗಳು, ಓಣಿಯಲ್ಲಿ ಡೆಂಗ್ಯೂ ಜ್ವರ ಉಲ್ಬಣಿಸುವ ಮುನ್ನ ಪುರಸಭೆ ಮತ್ತು ಆರೋಗ್ಯ ಇಲಾಖೆ ಅಧಿಕಾರಿಗಳು ಎಚ್ಚೆತ್ತು ನಿಯಂತ್ರಣಕ್ಕೆ ಮುಂದಾಗಬೇಕು ಎಂದು ಒತ್ತಾಯಿಸಿದ್ದಾರೆ.
ಓಣಿಯ ರಸ್ತೆಯಲ್ಲಿ ಕೊಳಚೆ ನೀರು, ಕಸ ಸಂಗ್ರಹಗೊಂಡಿರುವುದು ಗಮನಕ್ಕಿದೆ. ಕೂಡಲೇ ಸ್ವಚ್ಛತೆ ಹಾಗೂ ಸೊಳ್ಳೆಗಳ ನಿಯಂತ್ರಣಕ್ಕೆ ಫಾಗಿಂಗ್ ಔಷಧಿ ಸಿಂಪರಣೆಗೆ ಕ್ರಮಕೈಗೊಳ್ಳಿ ಎಂದು ಪುರಸಭೆ ಅಧಿಕಾರಿಗಳಿಗೆ ತಿಳಿಸುತ್ತೇನೆ. ನಿವಾಸಿಗಳು ಎಲ್ಲೆಂದರಲ್ಲಿ ಕಸ ಹಾಕಬಾರದು, ಪರಿಸರ ಸ್ವಚ್ಛತೆ ಕಾಪಾಡಿಕೊಳ್ಳಬೇಕು.
– ಕಲ್ಲೇಶ ತಾಳದ,
ಪುರಸಭೆ ಸದಸ್ಯರು 19ನೇ ವಾರ್ಡ್ ಕುಷ್ಟಗಿ.
ಕುಷ್ಟಗಿ ಪಟ್ಟಣದ 19ನೇ ವಾರ್ಡಲ್ಲಿ ಓರ್ವ ಯುವತಿಗೆ ಡೆಂಗ್ಯೂ ಜ್ವರ ಪಾಸಿಟಿವ್ ಬಂದಿದೆ. ಯುವತಿಯ ಮನೆಗೆ ಭೇಟಿ ನೀಡಲಾಗುತ್ತದೆ. ಮುಂಜಾಗ್ರತಾ ಕ್ರಮವಾಗಿ ವಾರ್ಡಿನ ಸ್ವಚ್ಛತೆ ಕಾಪಾಡಲು ಕ್ರಮಕೈಗೊಳ್ಳಿ ಎಂದು ಪುರಸಭೆಗೆ ಪತ್ರ ಬರೆಯಲಾಗುವುದು.
– ಪ್ರಕಾಶ ಗುತ್ತೇದಾರ
ಮಲೇರಿಯಾ ತಾಂತ್ರಿಕ ಸಹಾಯಕ, ಆರೋಗ್ಯ ಇಲಾಖೆ ಕುಷ್ಟಗಿ.