ಕ್ಯಾದಿಗುಪ್ಪಾ | ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ದುರಗಮ್ಮ ಹರಿಜನ ಆಯ್ಕೆ

ಸುದ್ದಿ ಸಮರ್ಪಣ |

ಕುಷ್ಟಗಿ : ತಾಲೂಕಿನ ಕ್ಯಾದಿಗುಪ್ಪ ಗ್ರಾಮ ಪಂಚಾಯತಿ ನೂತನ ಅಧ್ಯಕ್ಷರಾಗಿ ದುರಗಮ್ಮ ಹುಲ್ಲಪ್ಪ ಹರಿಜನ ಆಯ್ಕೆಯಾಗಿದ್ದಾರೆ.

ಮುತ್ತಮ್ಮ ಮಹಾಂತೇಶ ರುಳ್ಳಿ ರಾಜಿನಾಮೆಯಿಂದ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಗುರುವಾರ ಚುನಾವಣೆ ನಡೆಯಿತು. ನೇತ್ರಾವತಿ ಮಂಜುನಾಥ ನಂದವಾಡಗಿ ಮತ್ತು ದುರ್ಗಮ್ಮ ಹುಲ್ಲಪ್ಪ ಹರಿಜನ ಅವರು ನಾಮಪತ್ರಗಳನ್ನು ಸಲ್ಲಿಸಿದ್ದರು. 16 ಜನ ಸದಸ್ಯರು ಬಲ ಹೊಂದಿರುವ ಪಂಚಾಯಿತಿಯಲ್ಲಿ ದುರ್ಗಮ್ಮ ಹುಲ್ಲಪ್ಪ ಹರಿಜನ ಎಂಟು ಮತಗಳನ್ನು ಪಡೆದು ಒಂದು ಮತದ ಅಂತರದಿಂದ ಜಯಶಾಲಿಯಾಗಿದ್ದಾರೆ. ಇನ್ನೋರ್ವ ಅಭ್ಯರ್ಥಿ ನೇತ್ರಾವತಿ ಮಂಜುನಾಥ ನಂದವಾಡಗಿ ಏಳು ಮತಗಳನ್ನು ಪಡೆದು ಪರಾಜಿತರಾದರು. ಒಂದು ಮತ ತಿರಸ್ಕಾರಗೊಂಡಿದೆ ಎಂದು ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದ ತಹಸೀಲ್ದಾರ್ ಶೃತಿ ಮಳ್ಳಪ್ಪಗೌಡರ್ ಅವರ ಪ್ರಕಟಿಸಿದರು.

ಬಳಿಕ ನೂತನ ಅಧ್ಯಕ್ಷೆ ದುರಗಮ್ಮ ಹುಲ್ಲಪ್ಪ ಹರಿಜನ ಅವರನ್ನು ತಹಸೀಲ್ದಾರ್ ಅವರು ಸನ್ಮಾನಿಸಿದರು.
ಈ ವೇಳೆ ಪಿಡಿಒ ಶ್ರೀಶೈಲ ಪೊಲಿಶಿ, ಕಂದಾಯ ನಿರೀಕ್ಷಕ ಉಮೇಶಗೌಡ ಸೇರಿದಂತೆ ಸರ್ವ ಸದಸ್ಯರು, ಪಂಚಾಯಿತಿ ಸಿಬ್ಬಂದಿ ಹಾಜರಿದ್ದರು.